ಕೊರಟಗೆರೆ: ಹಲಸಿನಕಾಯಿ ಕೀಳಲು ಮರ ಹತ್ತಿದ ಕೂಲಿ ಕಾರ್ಮಿಕ ಕಾಲು ಜಾರಿ ಕೆಳಗೆ ಬಿದ್ದು ಸಾವನ್ನಪ್ಪಿದ ಘಟನೆ ಕೊರಟಗೆರೆ ತಾಲೂಕಿನ ನೀಲಗೊಂಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಳಲಸಂದ್ರ ಗ್ರಾಮದ ಸಮೀಪವಿರುವ ತೋಟದಲ್ಲಿ ನಡೆದಿದೆ.
ಹಲಸಿನಕಾಯಿ ಕೀಳಲು ಹೇಳಿದ ತೋಟದ ಮಾಲೀಕ ಬಸವರಾಜು. ಕೂಲಿ ಕಾರ್ಮಿಕ ಸಾವಗೀಡಾಗಿದ್ದಾರೆ ಎಂದು ತಿಳಿದ ಕೂಡಲೇ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಮಧುಸೂದನ್ ಮೃತಪಟ್ಟವರಾಗಿದ್ದಾರೆ. ಮಧುಸೂದನ್ ಪ್ರತಿದಿನವೂ ಕೆಲಸಕ್ಕೆ ಬರುವುದಿಲ್ಲ ಎಂದರೂ, ತೋಟದ ಮಾಲೀಕ ಬಲವಂತವಾಗಿ ಕರೆದುಕೊಂಡು ಹೋಗಿ ಮದ್ಯಪಾನ ಮಾಡಿಸಿ ತನ್ನ ತೋಟದ ಕೆಲಸ ಮಾಡಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಮರ ಹತ್ತಲು ಬರದಿದ್ದವನಿಗೆ, ಮದ್ಯಪಾನ ಮಾಡಿಸಿ ಮರ ಹತ್ತಲು ತೋಟದ ಮಾಲೀಕ ಹೇಳಿರುವುದಾಗಿ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಬೆಳಿಗ್ಗೆ 7:45ಕ್ಕೆ ಘಟನೆ ನಡೆದಿದ್ದರೂ ಮಧ್ಯಾಹ್ನದವರೆಗೂ ಯಾರಿಗೂ ಮಾಹಿತಿ ನೀಡದೆ ಊರಿನ ಪ್ರಮುಖರ ಜೊತೆ ಸೇರಿ ಪ್ರಕರಣ ಮುಚ್ಚಿ ಹಾಕುವ ಯತ್ನ ಮಾಡಿದ್ದಾರೆ. ಊರಿನ ಜನರಿಗೆ ಮಾಹಿತಿ ತಿಳಿಯುತ್ತಿದ್ದಂತೆ, ತೋಟದ ಮಾಲೀಕ ಏನು ಗೊತ್ತಿಲ್ಲದ ಹಾಗೆ ಸ್ಥಳಕ್ಕೆ ಬಂದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಕೊರಟಗೆರೆ ತಾಲೂಕಿನ ನೀಲಗೊಂಡನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಳಲಸಂದ್ರ ಗ್ರಾಮದ ಸಮೀಪವಿರುವ ತೋಟದಲ್ಲಿ ಈ ದುರ್ಘಟನೆ ನಡೆದಿದ್ದು, ಸುಮಾರು ವರ್ಷದಿಂದ ತನ್ನ ತೋಟದಲ್ಲಿ ಕೆಲಸ ಮಾಡುತ್ತಿದ್ದ ಹುಳಿಸೊಪ್ಪನಹಳ್ಳಿ ಗ್ರಾಮದ ವೆಂಕಟಶಾಮಯ್ಯ ಮಗನಾದ ಮಧುಸೂದನ್ ಕೂಲಿ ಕಾರ್ಮಿಕ ಬಲಿಯಾಗಿದ್ದು, ಈತನಿಗೆ ನ್ಯಾಯದೊರಕಿಸಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಬಡ ಕುಟುಂಬಕ್ಕೆ ಎರಡು ಲಕ್ಷ ಹಣದ ಆಸೆ ತೋರಿಸಿ ತೋಟದ ಮಾಲೀಕನ ಜೊತೆ ಸೇರಿ ಊರಿನ ಮುಖಂಡರಾದ ಸೀನಪ್ಪ, ಜಯರಾಮಯ್ಯ, ಚಂದ್ರು ಶ್ರೀನಿವಾಸ್, ಮಂಜಣ್ಣ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿರುವುದಾಗಿ ಆರೋಪಿಸಲಾಗಿದೆ. ಪ್ರಕರಣದ ಪೂರ್ಣ ಮಾಹಿತಿ ಪೊಲೀಸ್ ತನಿಖೆಯಿಂದ ಹೊರಬರಬೇಕಾಗಿದೆ.
ಹಳ್ಳಿಯ ಹಿರಿಯರ ಮಧ್ಯಸ್ಥಿಕೆಯಲ್ಲಿ ಬಡಪಾಯಿ ಸಾವಿಗೆ ನ್ಯಾಯ ದೊರಕಿಸಿ, ತೋಟದ ಮಾಲೀಕನ ವಿರುದ್ಧ ಕ್ರಮ ಕೈಗೊಂಡು ಬಡ ಕುಟುಂಬಕ್ಕೆ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸ್ ಠಾಣಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296