ಬೆಂಗಳೂರು: ಭವಿಷ್ಯದ ದೃಷ್ಠಿಯಿಂದ ಸ್ಟಾರ್ಟ್ ಅಪ್ ಗಳ ಬೆಳವಣಿಗೆಯನ್ನು ಮತ್ತಷ್ಟು ವೇಗಗೊಳಿಸಲು ಇಂತಹ ಕಾರ‍್ಯಕ್ರಮಗಳನ್ನು ಆಯೋಜಿಸುತ್ತಿರುವುದು ನಿಜಕ್ಕೂ ಉತ್ತಮ ಬೆಳವಣಿಗೆ. ಈ ನಮ್ಮ ಪರಿಸರದ ವ್ಯವಸ್ಥೆಯೊಳಗೆ ಸ್ಟಾರ್ಟ್ ಅಪ್ ಕಾನ್ಕ್ಲೇವ್ ಕೃಷಿಯಲ್ಲಿ ನಾವೀನ್ಯತೆಯ ಸಹಯೋಗ ಮತ್ತು ಸ್ಟಾರ್ಟ್ ಅಪ್ ಗಳ ವೇಗವರ್ಧನೆ ಮಾಡುವ ಗುರಿಯನ್ನು ಈ ಕಾನ್ಕ್ಲೇವ್ ಹೊಂದಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅಭಿಪ್ರಾಯವ್ಯಕ್ತಪಡಿಸಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕೃಷಿ ನಾವೀನ್ಯತೆ ಮತ್ತು ಉದ್ಯಮ ಶೀಲತೆಯನ್ನು ಉತ್ತೇಸುವ ಸಲುವಾಗಿ ಅಗ್ರಿ ಸ್ಟಾರ್ಟ್ ಅಪ್ ಕಾನ್ ಕ್ಲೇವ್ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಈ ಸ್ಟಾರ್ಟ್ ಅಪ್ ಕಾನ್ಕ್ಲೇವ್ ಜ್ಞಾನ ವಿನಿಮಯಕ್ಕೆ ವೇದಿಕೆಯನ್ನು ಸೃಷ್ಟಿಸುತ್ತದೆ. ಅಲ್ಲದೇ ಬೆಂಗಳೂರು ಸ್ಟಾರ್ಟ್ ಅಪ್ ಗಳ ಹಬ್ ಎಂದು ತಿಳಿಸಿದರು.
ಇಂತಹ ಸಮ್ಮೇಳದ ಮೂಲಕ ಕೃಷಿಯನ್ನು ಮರು ರೂಪಿಸುವುದಲ್ಲದೇ ಅತ್ಯಾಧುನಿಕ ಕೃಷಿ ತಂತ್ರಜ್ಞಾನಕ್ಕೆ ಪರಿಹಾರ ಸೂಚಿಸುವಲ್ಲಿಯೂ ಪ್ರಮುಖ ಪಾತ್ರವಹಿಸುತ್ತದೆ ಎಂದು ತಿಳಿಸಿದ ಸಚಿವರು, ಸ್ಟಾರ್ಟ್ ಅಪ್ ಗಳು ಹೂಡಿಕೆದಾರರ, ಕಾರ್ಪೋರೇಟ್ ಗಳ ಮತ್ತು ನೀತಿ–ನಿರೂಪಕರ ನಡುವೆ ಸೇತುವೆ ಸಂಪರ್ಕವಾಗಿದೆ ಎಂದು ತಿಳಿಸಿದರು.
ಮುಂದಿನ ಪೀಳಿಗೆಗೆ ಕೃಷಿ ಹಾಗೂ ಕೃಷಿ ಉದ್ಯಮಿಗಳನ್ನು ಪ್ರೇರೇಪಿಸುವ ಯಶಸ್ಸಿನ ಕಥೆಗಳನ್ನು ಹಂಚಿಕೊಳ್ಳುವ ಮೂಲಕ ಇಂತಹ ಸಮಾವೇಶ ಪ್ರೇರಣೀಯ. ಇತ್ತಿಚಿನ ದಿನಗಳಲ್ಲಿ ಪ್ರಕೃತಿ ಹಾಗೂ ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಯಂತ ವಿಚಾರಗಳನ್ನು ಚರ್ಚಿಸುವುದಕ್ಕೆ ಈ ವೇದಿಕೆ ಸೂಕ್ತವಾಗಿದೆ ಎಂದು ಕೃಷಿ ಸಚಿವರು ಹೇಳಿದರು.
ಡಿಸೆಂಬರ್ 31, 2023 ರ ಹೊತ್ತಿಗೆ 1,17,254 ಮನ್ನಣೆ ಪಡೆದ ಸ್ಟಾರ‍್ಟ್ಅಪ್ ಗಳೊಂದಿಗೆ 3 ನೇ ಅತಿದೊಡ್ಡ ಸ್ಥಾನವನ್ನು ಪಡೆದುಕೊಂಡಿರುವ ಭಾರತವು ಸ್ಟಾರ್ಟ್ ಅಪ್ ನ ಜಾಗತಿಕ ನಾಯಕನಾಗಿ ಹೊರಹೊಮ್ಮಿದೆ. ಅಲ್ಲದೇ ಈ ಸ್ಟಾರ್ಟ್ ಅಪ್ ಗಳು 56 ವೈವಿಧ್ಯಮಯ ಕೈಗಾರಿಕಾ ವಲಯಗಳಲ್ಲಿ ವ್ಯಾಪಿಸಿದ್ದು 12.42 ಲಕ್ಷ ನೇರ ಉದ್ಯೋಗಗಳನ್ನು ಸೃಷ್ಟಿ ಮಾಡಿದೆ ರೂ.349.37 ಬಿಲಿಯನ್ ಮೊತ್ತದ ಕೃಷಿ ಸ್ಟಾರ್ಟ್ ಅಪ್ ಗಳು ಶೇ 5% ರಷ್ಟಿದ್ದು, ಕೃಷಿ ಮತ್ತು ಆಹಾರ ವ್ಯವಸ್ಥೆಗಳಲ್ಲಿ ನಿರ್ಣಾಯಕ ಸವಾಲುಗಳಿಗೆ ಇದು ಪರಿಹಾರವಾಗಿದೆ ಎಂದು ತಿಳಿಸಿದರು.
ಪ್ರಸ್ತುತ, ಭಾರತವು 2,800 ಮಾನ್ಯತೆ ಪಡೆದ ಅಗ್ರಿ-ಟೆಕ್ ಸ್ಟಾರ್ಟ್ ಅಪ್ ಗಳಿಗೆ ನೆಲೆಯಾಗಿದೆ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳು ಕೃಷಿ ಆವಿಷ್ಕಾರದ ಕೇಂದ್ರಗಳಾಗಿದ್ದು, ಈ ಸ್ಟಾರ್ಟ್ ಅಪ್ ಗಳಲ್ಲಿ ಸುಮಾರು 60% ರಷ್ಟು ಶ್ರೇಣಿ–1 ಮತ್ತು ಶ್ರೇಣಿ–2 ನಗರಗಳಲ್ಲಿ ಕೇಂದ್ರೀಕೃತವಾಗಿವೆ ಎಂದು ಸಚಿವರು ತಿಳಿಸಿದರು.
ಕೃಷಿ–ತಂತ್ರಜ್ಞಾನದ ಬೆಳವಣಿಗೆಗೆ ಸ್ಟಾರ್ಟ್ ಅಪ್ ಗಳು ಪ್ರೇರಕವಾಗಿದ್ದು, ಸರ್ಕಾರದ ಮೂಲಕ PM KISAN ಮತ್ತು ಅಗ್ರಿ–ಇನ್ಫ್ರಾ ಫಂಡ್ ನಂತಹ ಕಾರ್ಯಕ್ರಮಗಳು ಕೃಷಿಯಲ್ಲಿ ತಂತ್ರಜ್ಞಾನದ ಏಕೀಕರಣವನ್ನು ಪ್ರೋತ್ಸಾಹಿಸುತ್ತಿದ್ದು, ಹೂಡಿಕೆದಾರರ ಆಸಕ್ತಿಯಿಂದ ಆಹಾರ ಭದ್ರತೆ ಮತ್ತು ಸುಸ್ಥಿರ ಅಭ್ಯಾಸಗಳ ಮೇಲೆ ಜಾಗತಿಕ ಗಮನ ಹರಿಸುವಿಕೆಯಿಂದ ಈ ವಲಯವು ಹೂಡಿಕೆಯಲ್ಲಿ ತೀವ್ರ ಏರಿಕೆಯನ್ನು ಕಂಡಿದೆ.
ತಾಂತ್ರಿಕ ಪ್ರಗತಿಯಿಂದ AI ತಂತ್ರಜ್ಞಾನ ಕಲಿಕೆ ಮತ್ತು ಕೃಷಿಯಲ್ಲಿ IOT ಅಪ್ಲಿಕೇಷನ್ ಗಳ ಅಸಮರ್ಥತೆಗಳನ್ನು ಪರಿಹರಿಸಲು ಸಹಾಯ ಮಾಡುತ್ತಿದ್ದು, ರಫ್ತು ಅವಕಾಶಗಳಿಂದ ಜಾಗತಿಕವಾಗಿ ಭಾರತೀಯ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಉತ್ಪಾದನೆ ಮತ್ತು ಪೂರೈಕೆಯಲ್ಲಿ ಸ್ಟಾರ್ಟ್ ಅಪ್ ಗಳಿಗೆ ಪ್ರೋತ್ಸಾಹ ಸಿಗುತ್ತದೆ ಎಂದು ಸಚಿವರು ತಿಳಿಸಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಅಭಿವೃದ್ಧಿಪಡಿಸಿದ 50 ಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಗಳ ವಸ್ತು ಪ್ರದರ್ಶನವನ್ನು ಸಚಿವರು ಇದೇ ವೇಳೆ ವೀಕ್ಷಿಸಿ ಮಾಹಿತಿ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಸುರೇಶ್, ಕೃಷಿ ವಿವಿಯ ನಿರ್ದೇಶಕರುಗಳು ಸೇರಿದಂತೆ ಇತರ ಗಣ್ಯರು ಭಾಗವಹಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx