ಬೀದರ್: ಡಾ.ಬಿ.ಆರ್. ಅಂಬೇಡ್ಕರ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ಕರೆ ನೀಡಿದ ಬೀದರ್ ಬಂದ್ ಗೆ ಉತ್ತಮ ಪ್ರತಿಕ್ರಿಯೆ ದೊರಕಿತು
ಸ್ವಾಭಿಮಾನಿ ಡಾ.ಬಿ.ಆರ್.ಅಂಬೇಡ್ಕರ್ ವಾದಿಗಳ ಹೋರಾಟ ಸಮಿತಿಯಿಂದ ಗುರುವಾರ ಕರೆ ನೀಡಿರುವ ಬೀದರ್ ಬಂದ್ ಗೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿದರು.
ನಗರದಲ್ಲಿ ವಾಣಿಜ್ಯ ಚಟುವಟಿಕೆ ಸ್ಥಗಿತಗೊಂಡಿದ್ದವು. ಹೊಟೇಲ್ , ರೆಸ್ಟೋರೆಂಟ್, ಶಾಲೆ—ಕಾಲೇಜುಗಳು, ಬ್ಯಾಂಕ್ ಗಳು ಬಾಗಿಲು ಮುಚ್ಚಿದ್ದವು. ಕೆಎಸ್ಆರ್ ಟಿಸಿ ಸಂಚಾರವೂ ಇರಲಿಲ್ಲ. ಬೆಳಿಗ್ಗೆ ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಅಂಗಡಿ ಮುಂಗಟ್ಟು ಮುಚ್ಚಿ ಬಂದ್ ಗೆ ಬೆಂಬಲಿಸಿದರು. ನಗರದಲ್ಲಿ ಆಟೊ ದ್ವಿಚಕ್ರ ವಾಹನ ಕಾರು ಓಡಾಟ ವಿರಳವಾಗಿತ್ತು.
ಬೆಳಿಗ್ಗೆಯಿಂದಲೇ ಪ್ರತಿಭಟನೆ ಆರಂಭಿಸಿದ ವಿವಿಧ ಸಂಘಟನೆಗಳ ಹೋರಾಟಗಾರರು ಬೈಕ್ ಗಳಿಗೆ ನೀಲಿ ಧ್ವಜ ಕಟ್ಟಿಕೊಂಡು ನಗರದಲ್ಲಿ ಪ್ರಮುಖ ರಸ್ತೆಗಳಲ್ಲಿ ರಾಲಿ ನಡೆಸಿ ಬಂದ್ ಗೆ ಬೆಂಬಲಿಸಲು ಕೋರಿದರು.
ನೌಬಾದ್ ಬಸವೇಶ್ವರ ವೃತ್ತದಲ್ಲಿ ಅಮಿತ್ ಶಾ ಅವರ ಅಣುಕು ಶವಯಾತ್ರೆ ಮೆರವಣಿಗೆ ನಡೆಸಿ ಮಾನವ ಸರಪಳಿ ನಿರ್ಮಿಸಿದ ವಿದ್ಯಾರ್ಥಿ ಸಂಘಟನೆಗಳ ಪ್ರಮುಖರು ಅಮಿತ್ ಶಾ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಸಭೆಯಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅವಮಾನಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಸಂಪುಟದಲ್ಲಿ ಮುಂದುವರೆಯಲು ಯಾವ ನೈತಿಕತೆಯೂ ಇಲ್ಲ, ದೇಶದಲ್ಲಿ ಶಾಂತಿ ಸೌಹಾರ್ದತೆ ಕಾಪಾಡಲು ಕೂಡಲೇ ಅಮಿತ್ ಶಾ ಅವರನ್ನು ಸಂಪುಟದಿಂದ ವಜಾಗೊಳಿಸಿ ಗಡಿಪಾರು ಮಾಡಬೇಕು ಎಂದು ಪ್ರತಿಭಟನಾಕಾರರು ಒಕ್ಕೊರಳಿನಿಂದ ಆಗ್ರಹಿಸಿದರು
ಪ್ರತಿಭಟನೆಯಲ್ಲಿ ಪ್ರಮುಖರಾದ ಸಂತೋಷ್ ಜೋಳದಾಬಕೆ ರಾಹುಲ್ ಖಂದಾರೆ, ಸುರೇಶ ಶಿಂಧೆ ಅಬ್ದುಲ್ ಅಜೀಜ್ ಮುನ್ನಾ, ಗೌತಮ್ ಚವಾಣ, ಕಪೀಲ್ ಗೋಡಬೋಲೆ, ಅಮೃತ ಮೋಳಕೆರೆ, ವಿಲಾಸ್ ರಾವ್ ಮೋರೆ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿದರು.
ಭಾರತೀಯ ಸಂವಿಧಾನದಿಂದಲೇ ಸಂಸತ್ ಪ್ರವೇಶಿಸಿ ಗೃಹ ಮಂತ್ರಿಯಾದ ಅಮಿತ್ ಶಾ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಅಪಮಾನಿಸಿದ್ದು, ದೇಶದ ಕೋಟಿ ಕೋಟಿ ಅಂಬೇಡ್ಕರ್ ಅನುಯಾಯಿಗಳಿಗೆ ನೋವುಂಟು ಮಾಡಿದೆ. ಜಾತಿವಾದಿ ಮನಸ್ಥಿತಿಯ ಅಮಿತ್ ಶಾ ಅಧಿಕಾರದ ದರ್ಪದಿಂದ ಬಾಬಾ ಸಾಹೇಬ್ ರನ್ನು ಅಪಾಮಾನಿಸಿ ದೇಶದ್ರೋಹ ಕೃತ್ಯ ಎಸಗಿದ್ದಾರೆ. ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಸಮಾನ ಹಕ್ಕು ಕಲ್ಪಿಸಿದ ಅಂಬೇಡ್ಕರ್ ಅವರ ಅಪಾಮಾನ ಸಹಿಸಲಾಗದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಾ.ಅಂಬೇಡ್ಕರ್ ವೃತ್ತದಲ್ಲಿ ನಡೆದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರ ಮುಖಾಂತರ ರಾಷ್ಟ್ರಪತಿ ಹಾಗೂ ಪ್ರಧಾನ ಮಂತ್ರಿಗಳಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ವರದಿ: ಅರವಿಂದ ಮಲ್ಲಿಗೆ, ಬೀದರ್
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx