ರಾಮನಗರ: ಚೆನ್ನಪಟ್ಟಣ ಉಪಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಮುಂದಾಗಿದ್ದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಗೆ ಬಿಜೆಪಿ ಹೈಕಮಾಂಡ್ ಬುಲಾವ್ ನೀಡಿದೆ.
ಚುನಾವಣಾ ಸಿದ್ಧತಾ ಭಾಗವಾಗಿ ಸಿ.ಪಿ.ಯೋಗೇಶ್ವರ್ ಬೆಂಬಲಿಗರು ಸಮಾನ ಮನಸ್ಕರರ ಸಮಾವೇಶ ಆಯೋಜಿಸಿದ್ದರು. ಇದೀಗ ಹೈಕಮಾಂಡ್ ಕರೆಯ ಹಿನ್ನೆಲೆ ಸಿ.ಪಿ.ಯೋಗೇಶ್ವರ್ ದೆಹಲಿಗೆ ತೆರಳಲಿದ್ದು, ಈ ಹಿನ್ನೆಲೆಯಲ್ಲಿ ಸಮಾನ ಮನಸ್ಕರರ ಸಮಾವೇಶ ಕೊನೆಯ ಕ್ಷಣಗಳಲ್ಲಿ ರದ್ದಾಗಿದೆ ಎಂದು ತಿಳಿದು ಬಂದಿದೆ.
ರಾಮನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ‘ನಮ್ಮ ಶಾಸಕ ನಮ್ಮ ಹಕ್ಕು’ ಹೆಸರಲ್ಲಿ ಸಮಾನ ಮನಸ್ಕರರ ಹಾಗೂ ಯೋಗೇಶ್ವರ್ ಅಭಿಮಾನಿ ಬಳಗದಿಂದ ಸಮಾವೇಶ ಆಯೋಜಿಸಲಾಗಿತ್ತು.
ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಸಿಗದಿದ್ದರೆ, ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸಲಾಗಿತ್ತು. ಚೆನ್ನಪಟ್ಟಣ ಕ್ಷೇತ್ರದ ಮೇಲೆ ಜೆಡಿಎಸ್ ಕಣ್ಣಿಟ್ಟಿದ್ದು, ಈ ಹಿನ್ನೆಲೆಯಲ್ಲಿ ಸಿ.ಪಿ.ಯೋಗೇಶ್ವರ್ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದಾರೆ. ಚನ್ನಪಟ್ಟಣದಲ್ಲಿ ದೋಸ್ತಿಗಳ ಮುಖಾಮುಖಿ ಸ್ಪರ್ಧೆಯಾದ್ರೆ, ಕಾಂಗ್ರೆಸ್ ಗೆ ಲಾಭವಾಗುವ ಲೆಕ್ಕಾಚಾರಗಳು ಕೇಳಿ ಬಂದಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296