ಬೆಂಗಳೂರು: ರಾಜ್ಯದ ಆರೋಗ್ಯ ಇಲಾಖೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಸರ್ಕಾರಿ ಆಸ್ಪತ್ರೆಗಳು ಕೋಮಾ ಸ್ಥಿತಿಯಲ್ಲಿವೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಅವರು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿದ್ದಾರೆ.
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳ ದಾಸ್ತಾನಿಲ್ಲ. ವೈದ್ಯರು ಮತ್ತು ಶುಶ್ರೂಷಕರ ನೂರಾರು ಹುದ್ದೆಗಳು ಖಾಲಿ ಇವೆ. ಸ್ಕ್ಯಾನಿಂಗ್ ಸೇವೆ ಒದಗಿಸುವ ಕಂಪನಿಗಳಿಗೆ ಬಾಕಿ ಹಣ ಪಾವತಿ ಮಾಡದ ಕಾರಣ, ರಾಜ್ಯಾದ್ಯಂತ ಸ್ಕ್ಯಾನಿಂಗ್ ಸೇವೆಗಳು ಕುಂಠಿತಗೊಂಡಿವೆ. ಇದರಿಂದ ಬಡ ರೋಗಿಗಳು ಸಂಕಷ್ಟಕ್ಕೀಡಾಗಿದ್ದಾರೆ. ಕಾಂಗ್ರೆಸ್ ಸರ್ಕಾರವು ಆಂತರಿಕ ಕಚ್ಚಾಟ, ಬಣ ರಾಜಕೀಯ ಮತ್ತು ಅಧಿಕಾರದ ಮೇಲಾಟದಲ್ಲಿ ಮುಳುಗಿದೆ. ಇದರಿಂದಾಗಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ ಎಂದು ಅವರು ಆರೋಪಿಸಿದ್ದಾರೆ.
“ವಿಧಾನಸಭಾ ಅಧಿವೇಶನದಲ್ಲಿ ನಾನು ಈ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದಾಗ ಆರೋಗ್ಯ ಸಚಿವರು ಎಲ್ಲವೂ ಸರಿಯಿದೆ ಎಂದು ಸಮರ್ಥಿಸಿಕೊಂಡಿದ್ದರು. ಆದರೆ ಈಗ ಮಾಧ್ಯಮಗಳೇ ಸರ್ಕಾರದ ವೈಫಲ್ಯಕ್ಕೆ ಕನ್ನಡಿ ಹಿಡಿದಿವೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಸಾರ್ವಜನಿಕರು ದಂಗೆ ಏಳುವ ದಿನ ದೂರವಿಲ್ಲ,” ಎಂದು ಅಶೋಕ ಎಚ್ಚರಿಕೆ ನೀಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


