ತುಮಕೂರು: ನಗರದ ಮಹಾತ್ಮಾ ಗಾಂಧಿ (ಎಂ.ಜಿ.) ಕ್ರೀಡಾಂಗಣದಲ್ಲಿ ನಡೆಯುತ್ತಿರುವ 24ನೇ ರಾಷ್ಟ್ರೀಯ ಜೂನಿಯರ್ (U–20) ಅಥ್ಲೆಟಿಕ್ಸ್ ಫೆಡರೇಶನ್ ಕಪ್ ನಲ್ಲಿ ಡೋಪಿಂಗ್ ಶಂಕೆ ವ್ಯಕ್ತವಾಗಿದೆ.
ಕ್ರೀಡಾಂಗಣದ ಶೌಚಾಲಯದಲ್ಲಿ ಬಳಸಿದ 4ರಿಂದ 5 ಸಿರಿಂಜ್ ಗಳು ಮತ್ತು ಸೂಜಿಗಳು ಪತ್ತೆಯಾಗಿರುವುದು ಈ ಅನುಮಾನಕ್ಕೆ ಬಲ ನೀಡಿದೆ. ಕೆಲವು ಅಥ್ಲೀಟ್ ಗಳು ತಮ್ಮ ಪ್ರದರ್ಶನವನ್ನು ಉತ್ತಮಪಡಿಸಿಕೊಳ್ಳಲು ನಿಷೇಧಿತ ಉತ್ತೇಜಕಗಳನ್ನು ಬಳಸಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
ಸ್ಪರ್ಧೆಯ ನಿರ್ದೇಶಕ ಸತ್ಯನಾರಾಯಣ ಅವರು ಶೌಚಾಲಯದಲ್ಲಿ ಸಿರಿಂಜ್ ಗಳು ಪತ್ತೆಯಾಗಿರುವುದನ್ನು ಖಚಿತಪಡಿಸಿದ್ದಾರೆ. ಆದರೆ, ಇದರಲ್ಲಿ ಭಾಗಿಯಾಗಿರುವ ನಿರ್ದಿಷ್ಟ ಅಥ್ಲೀಟ್‌ಗಳ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಡೋಪಿಂಗ್ ವಿರೋಧಿ ಸಂಸ್ಥೆಯ (NADA) ಅಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಕ್ರೀಡಾಪಟುಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಿದ್ದಾರೆ. ಪದಕ ವಿಜೇತರು ಮತ್ತು ಅಂತಿಮ ಸುತ್ತು ತಲುಪಿದ ಅಥ್ಲೀಟ್ ಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಒಂದು ವೇಳೆ ಡೋಪಿಂಗ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದರೆ, ಅಂತಹ ಕ್ರೀಡಾಪಟುಗಳಿಗೆ ನಾಲ್ಕು ವರ್ಷಗಳ ಕಾಲ ನಿಷೇಧ ಹೇರುವ ಸಾಧ್ಯತೆ ಇದೆ. ಈ ಕ್ರೀಡಾಕೂಟವು ಹಾಂಗ್ ಕಾಂಗ್ ನಲ್ಲಿ ನಡೆಯಲಿರುವ ಏಷ್ಯನ್ ಅಂಡರ್–20 ಅಥ್ಲೆಟಿಕ್ಸ್ ಮತ್ತು ಅಮೆರಿಕದ ಯೂಜಿನ್ ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಅಂಡರ್–20 ಚಾಂಪಿಯನ್ ಶಿಪ್ ಗೆ ಅರ್ಹತಾ ಸುತ್ತಿನ ಪಂದ್ಯಾವಳಿಯಾಗಿದೆ. ಈ ಕಾರಣದಿಂದಾಗಿ ಇಲ್ಲಿ ನಡೆಯುತ್ತಿರುವ ಡೋಪಿಂಗ್ ಆರೋಪವನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
ಜಿಲ್ಲಾ ಆಡಳಿತ ಮತ್ತು ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಷನ್ ಜಂಟಿಯಾಗಿ ಆಯೋಜಿಸಿರುವ ಈ ಪ್ರತಿಷ್ಠಿತ ಕೂಟದಲ್ಲಿ ಇಂತಹ ಬೆಳವಣಿಗೆ ನಡೆದಿರುವುದು ಕ್ರೀಡಾ ಪ್ರೇಮಿಗಳಲ್ಲಿ ಬೇಸರ ಮೂಡಿಸಿದೆ. ತನಿಖೆ ಮುಂದುವರಿದಿದ್ದು, ಹೆಚ್ಚಿನ ಮಾಹಿತಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


