ತುಮಕೂರು: ಮಕ್ಕಳನ್ನು, ಹದಿಹರೆಯದ ಯುವಜನರನ್ನು ಮೊಬೈಲ್ ನಿಂದ ಹೊರತರಲು ತುಮಕೂರಿನ ಶ್ರೀಸಿದ್ದವನ ಫ್ರೆಂಡ್ಸ್ ಅಸೋಸಿಯೇಷನ್ ವತಿಯಿಂದ ಜನವರಿ 12ರಿಂದ 16ರವರೆಗೆ ಹೆರಿಟೇಜ್ ಸ್ಟೋರ್ಟ್ಸ್ ಕಾರ್ನಿವೆಲ್ ಹೆಸರಿನಲ್ಲಿ ದೇಶಿಯ ಪಾರಂಪರಿಕ ಕ್ರೀಡೆಗಳ ಆಯೋಜನೆ ಮಾಡಿದೆ ಎಂದು ಶ್ರೀಸಿದ್ದವನ ಪ್ರೆಂಡ್ಸ್ ಆಸೋಸಿಯೇಷನ್ ನ ಧರ್ಮರಾಜ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕರೋನ ನಂತರದಲ್ಲಿ ಮಕ್ಕಳು, ಯುವಜನರು ಮೊಬೈಲ್ ಗೆ ದಾಸರಾಗಿರುವ ಪರಿಣಾಮ ಅವರ ಮಾನಸಿಕ ಆರೋಗ್ಯ ದಿನದಿಂದ ದಿನಕ್ಕೆ ಕೆಡುತ್ತಿದೆ. ಸ್ವತಹಃ ಶಿಕ್ಷಕರಾಗಿ ನಾವು ಇದನ್ನು ಗಮನಿಸಿದ್ದೇವೆ. ಹೇಗಾದರೂ ಮಾಡಿ ಮೊಬೈಲ್ ಗೀಳಿನಿಂದ ಮಕ್ಕಳು ಮತ್ತು ಯುವಜನರನ್ನು ಹೊರತರಬೇಕೆಂಬ ಉದ್ದೇಶದಿಂದ ಮೆದುಳಿಗೆ ಕೆಲಸ ನೀಡುವ, ನಲಿಯುತ್ತಲೇ ಕಲಿಯಬಹುದಾದ ಕರ್ನಾಟಕದ 8 ದೇಶಿಯ ಪಾರಂಪರಿಕ ಆಟಗಳು ಸೇರಿದಂತೆ ವಿಶ್ವದ 50 ಆಟಗಳನ್ನು ಆಡಿಸಲು ಒಂದು ವೇದಿಕೆ ಸಿದ್ದಗೊಳಿಸಲಾಗಿದೆ. ಉಪ್ಪಾರಹಳ್ಳಿ ರೈಲ್ವೆ ಅಂಡರ್ ಪಾಸ್ ಸಮೀಪವಿರುವ ಶೈವಿ ನಿವಾಸದಲ್ಲಿ ಪಾರಂಪರಿಕ ಕ್ರೀಡೆಗಳನ್ನು ಆಡಲು ಅವಕಾಶ ಕಲ್ಪಿಸಲಾಗಿದೆ. ಮಕ್ಕಳ ದೈಹಿಕ ಮತ್ತು ಮಾನಸಿಕ ಚಟುವಟಿಕೆಯನ್ನು ಉದ್ದೀಪನಗೊಳಿಸಲು ಹೊಸ ಪ್ರಯತ್ನ ಇದಾಗಿದೆ ಎಂದರು.
ಕರ್ನಾಟಕದ ದೇಶಿಯ ಪಾರಂಪರಿಕ ಕ್ರೀಡೆಗಳಾದ ಹಾವು, ಎಣಿ, ಚೆಸ್, ಪಗಡೆ, ಸ್ಮೃತಿ ಆಟ(ಮೆಮೋರಿ), ದಡಿ/ಮಿಲ್, ಬುಗುರಿ, ಚಿಣ್ಣಿ ದಾಂಡು, ಬಾಲ್ ಮತ್ತು ಬ್ಯಾಸ್ಕೇಟ್, ಟೆಕ್ ಟ್ಯಾಕ್ ಟೋ, ಹುಲಿ, ಕುರಿ ಸೇರಿದಂತೆ ಒಗಟುಗಳ ಬಿಡಿಸುವುದು, ಅರ್ಚರಿ, ಡಾರ್ಟ್ಸ್, ಟೆಬಲ್ ಟೆನ್ನಿಸ್ ಸೇರಿದಂತೆ ಒಟ್ಟು ಐವತ್ತು ಆಟಗಳನ್ನು ಆಡಲು ಅವಕಾಶ ಕಲ್ಪಿಸಲಾಗಿದೆ. ಆಟಗಳನ್ನು ಹೇಳಿಕೊಡಲು ನುರಿತ ತಜ್ಞರನ್ನು ಆಯೋಜಿಸಲಾಗಿದೆ. ಒಬ್ಬ ವ್ಯಕ್ತಿ ಒಂದು ಆಟಕ್ಕೆ ಎರಡು ರೂಗಳಂತೆ 100 ರೂ. ಪಾವತಿಸಿ, 50 ಆಟಗಳನ್ನು ನಿಗದಿತ 1 ಗಂಟೆಯೊಳಗೆ ಆಡಬಹುದಾಗಿದೆ. ಈಗಾಗಲೇ 26 ಜನರು ನೋಂದಾವಣೆ ಮಾಡಿಕೊಂಡಿದ್ದಾರೆ. ಅತ್ಯುತ್ತಮವಾಗಿ ಆಟವಾಡುವ ಆಟಗಾರರಿಗೆ ಸ್ಥಳದಲ್ಲಿಯೇ ಬಹುಮಾನಗಳನ್ನು ನೀಡಲಾಗುವುದು ಎಂದು ಧರ್ಮರಾಜ್ ತಿಳಿಸಿದರು.
ಶ್ರೀಸಿದ್ದವನ ಫ್ರೆಂಡ್ಸ್ ಅಸೊಸಿಯೇಷನ್ ಉಪನ್ಯಾಸಕರು, ಚಾರ್ಟೇಡ್ ಅಕೌಂಟೆಂಟ್ಸ್, ವೈದ್ಯರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಸಮಾನ ಮನಸ್ಕ 30 ಜನರ ತಂಡವೊಂದು ಮಕ್ಕಳು ಮೊಬೈಲ್ ಗೀಳಿನಿಂದ ಅವರ ದೈಹಿಕ, ಮಾನಸಿಕ ಬೆಳವಣಿಗೆಯ ಮೇಲಾಗುತ್ತಿರುವ ದುಷ್ಪರಿಣಾಮಗಳಿಂದ ಹೊರ ತರುವ ಉದ್ದೇಶದಿಂದ ಸುಮಾರು 2 ವರ್ಷಗಳ ಕಾಲ ಸಂಶೋಧನೆ ನಡೆಸಿ, ಬುದ್ದಿಯನ್ನು ಚುರುಕುಗೊಳಿಸುವ, ಮನರಂಜನೆಯನ್ನು ನೀಡುವ ದೇಶಿಯ ಪಾರಂಪರಿಕೆ ಕ್ರೀಡೆಗಳನ್ನು ಆಡಿಸಲು ರಿವೈವಿಂಗ್ ಗೇಮ್ಸ್, ರೀಕಿಂಡ್ಲಿಂಗ್ ಬಾಂಡ್ಸ್ ಹೆಸರಿನಲ್ಲಿ ದೇಶಿ ಆಟಗಳನ್ನು ಕಲಿಯಲು ಮತ್ತು ಆಟವಾಡಲು ಪ್ರೋತ್ಸಾಹ ನೀಡಲಾಗುತ್ತಿದೆ. ಇಲ್ಲಿ ಸಿಗುವ ಪ್ರೋತ್ಸಾಹದ ನಂತರ ಬೇಸಿಗೆ ಶಿಬಿರ ಸಹ ಆಯೋಜಿಸುವ ಉದ್ದೇಶವನ್ನು ಸಿದ್ದವನ ಫ್ರೆಂಡ್ಸ್ ಅಸೋಸಿಯೇಷನ್ ಹೊಂದಿದೆ ಎಂದರು.
ಶ್ರೀಸಿದ್ದವನ ಫ್ರೆಂಡ್ಸ್ ಅಸೋಸಿಯೇಷನ್‌ನ ಮತ್ತೊರ್ವ ಉಪನ್ಯಾಸಕ ರತನ್ ಜೈನ್ ಮಾತನಾಡಿ, ಮಕ್ಕಳು ಹೆಚ್ಚು ಸಮಯ ಮೊಬೈಲ್‌ನೊಂದಿಗೆ ಕಳೆಯುತ್ತಿರುವುದರಿಂದ ಅವರ ಮೆದುಳು, ಕಣ್ಣಿನ ಮೇಲೆ ದುಷ್ಪರಿಣಾಮ ಉಂಟಾಗುತ್ತಿವೆ. ಹಾರ್ಮೋನ್ ಗಳ ಅಸಮತೋಲನ ಕಂಡುಬರುತ್ತಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ನಮ್ಮ ಅಸೋಸಿಯೇಷನ್ ದೇಶಿಯ ಪಾರಂಪರಿಕ ಆಟಗಳ ಮೊರೆ ಹೋಗಿದೆ.ಇದರಲ್ಲಿ 12 ಇನ್ ಡೋರ್ ಮತ್ತು 26 ಔಟ್ ಡೋರ್ ಗೆಮ್ಸ್ ಗಳಿದ್ದು,ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಜನವರಿ 12 ರಿಂದ 16ರವರೆಗೆ ಹೆರಿಟೇಜ್ ಸ್ಟೋರ್ಟ್ಸ್ ಕಾರ್ನಿವಲ್ ನಲ್ಲಿ ಮಕ್ಕಳೊಂದಿಗೆ, ಪೋಷಕರು ಸಹ ಭಾಗವಹಿಸಿ, ತಾವು ಕಲಿತಿರುವ ಆಟಗಳ ಜೊತೆಗೆ, ಹೊಸ ಆಟಗಳನ್ನು ಕಲಿತು ಆಡುವ ಮೂಲಕ ಹೊಸತನವನ್ನು ಮೈಗೂಡಿಸಿಕೊಳ್ಳಬೇಕೆಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ವಿದ್ಯಾರ್ಥಿಗಳಾದ ಶ್ರವಣ್ ಮತ್ತು ಕುಸುಮ ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx