ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ (ಜೂನ್ 30) ಚುನಾವಣಾ ಆಯೋಗದ ವತಿಯಿಂದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಅಂಗವಾಗಿ ಮನೆ-ಮನೆ ಸಮೀಕ್ಷೆ (Enumeration) ಪ್ರಕ್ರಿಯೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸದಾಶಿವನಗರದ ತಮ್ಮ ನಿವಾಸದಲ್ಲಿ ಪತ್ನಿ ಸಮೇತರಾಗಿ ಬಿಎಲ್ ಓಗಳ (BLO) ಪ್ರಕ್ರಿಯೆಯಲ್ಲಿ ಭಾಗಿಯಾಗುವ ಮೂಲಕ ಇದಕ್ಕೆ ಚಾಲನೆ ನೀಡಿದರು.
ರಾಮನಗರ ಜಿಲ್ಲಾಧಿಕಾರಿ, ಕನಕಪುರ ತಹಸೀಲ್ದಾರ್ ಹಾಗೂ ಬಿಎಲ್ಓ ಅಧಿಕಾರಿಗಳು ಸಿಎಂ ನಿವಾಸಕ್ಕೆ ಭೇಟಿ ನೀಡಿ ಎಸ್ಐಆರ್ ಪ್ರಕ್ರಿಯೆ ನಡೆಸಿದರು. ಈ ವೇಳೆ ಡಿಸಿಯಿಂದ ಸಂಪೂರ್ಣ ಮಾಹಿತಿ ಪಡೆದ ಮುಖ್ಯಮಂತ್ರಿಗಳು, ತಮ್ಮ ಮೊಬೈಲ್ನಲ್ಲೇ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಪರಿಶೀಲನೆ ನಡೆಸಿದರು. “ನನ್ನದು ಹಾಗೂ ನನ್ನ ಹೆಂಡತಿಯ ಹೆಸರು ಲಿಸ್ಟ್ನಲ್ಲಿದೆ. ಹೇಗೆ ಲಾಗಿನ್ ಮಾಡಬೇಕು ಹೇಳಿಕೊಡಿ,” ಎಂದು ಅಧಿಕಾರಿಗಳಿಂದ ಮಾಹಿತಿ ಪಡೆದರು. ಆ್ಯಪ್ ಬಳಸಿದ ಬಳಿಕ ಪ್ರತಿಕ್ರಿಯಿಸಿದ ಅವರು, “ಸಾಮಾನ್ಯ ಜನರಿಗೆ ಫೋನ್ನಲ್ಲಿ ಆ್ಯಪ್ ಬಳಸುವುದು ಸ್ವಲ್ಪ ಕಷ್ಟವಾಗಬಹುದು, ಕೊಂಚ ಗೊಂದಲ ಉಂಟಾಗುತ್ತದೆ,” ಎಂದು ಅಭಿಪ್ರಾಯಪಟ್ಟರು.
ಬದಲಾವಣೆಗಳಿಗೆ ಇರುವ ಫಾರ್ಮ್ 8 ಅನ್ನು ಪಡೆದುಕೊಂಡ ಸಿಎಂ, “ಫಾರ್ಮ್ ಭರ್ತಿ ಮಾಡುವುದು ಎಷ್ಟು ಕಷ್ಟ ಇದೆ ಎಂದು ನಮಗೂ ಗೊತ್ತಾಗಲಿ, ಮಾಧ್ಯಮಗಳಲ್ಲೂ ಇದು ಪ್ರಸಾರವಾಗಲಿ” ಎಂದು ಹೇಳಿ ತಾವೇ ಖುದ್ದಾಗಿ ಹ್ಯಾಂಡ್ರೈಟಿಂಗ್ನಲ್ಲಿ ಅರ್ಜಿಯನ್ನು ಭರ್ತಿ ಮಾಡಿಕೊಟ್ಟರು. ನಂತರ ಮಾತನಾಡಿದ ಅವರು, “ಆ್ಯಪ್ ಬಳಕೆಯಲ್ಲಿ ನಾನೂ ಅನ್ಎಜುಕೇಟೆಡ್. ನನಗೂ ಗೊತ್ತಿರಲಿಲ್ಲ, ಕೇಳಿ ತಿಳಿದುಕೊಂಡೆ. ಆ್ಯಪ್ನಲ್ಲಿ ಮಾಡುವುದು ಒಂದು ಕಡೆಯಾದರೆ, ಭೌತಿಕವಾಗಿ ಅರ್ಜಿ ಭರ್ತಿ ಮಾಡಿಕೊಡುವುದು ಉತ್ತಮ,” ಎಂದರು.
ಇದೇ ವೇಳೆ ಗ್ಯಾರಂಟಿ ಯೋಜನೆಗಳ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಮುಖ್ಯಮಂತ್ರಿಗಳು, “ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರಿಗೆ ಗ್ಯಾರಂಟಿ ಸೌಲಭ್ಯ ಸಿಗುವುದಿಲ್ಲ. ಬಿಹಾರ ಹಾಗೂ ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ಇಂತಹ ಕ್ರಮ ಕೈಗೊಳ್ಳಲಾಗುತ್ತಿದೆ. ನಮ್ಮಲ್ಲೂ ವೋಟರ್ ಲಿಸ್ಟ್ನಲ್ಲಿ ಹೆಸರಿಲ್ಲದವರಿಗೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತೇವೆ. ಬೇರೆ ರಾಜ್ಯದವರಿಗೆ ನಾವು ಯಾಕೆ ಗ್ಯಾರಂಟಿ ನೀಡಬೇಕು?” ಎಂದು ಪ್ರಶ್ನಿಸಿದರು.
ಈ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ಜುಲೈ 29ರವರೆಗೆ ನಡೆಯಲಿದ್ದು, ಸಾರ್ವಜನಿಕರು ತಮ್ಮ ವಯಸ್ಸು, ಫೋನ್ ನಂಬರ್ ಹಾಗೂ ಫೋಟೋ ಸೇರಿದಂತೆ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳಲು ಅಧಿಕಾರಿಗಳು ಉತ್ತೇಜಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC




