ಹಿರಿಯೂರು: ಹಿರಿಯೂರು ತಾಲ್ಲೂಕಿನಲ್ಲಿ ನಾನು ಮಾಡಿದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಟೀಕೆ ಮಾಡಲು ಡಿ. ಸುಧಾಕರ್ ರವರಿಗೆ ಯಾವುದೇ ನೈತಿಕತೆ ಇಲ್ಲ ಎಂದು ಕ್ಷೇತ್ರದ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿನ ಹುಳಿಯಾರ್ ರಸ್ತೆಯಲ್ಲಿರುವ ನಗರದ ಶಾಸಕರ ಕಾರ್ಯಾಲಯದಲ್ಲಿ ನಗರಕ್ಕೆ ವಸತಿ ಸಚಿವ ಸೋಮಣ್ಣ ಪ್ರವಾಸ ಕೈಗೊಂಡಿರುವ ಕುರಿತಂತೆ ವಸತಿ ಯೋಜನೆ ಕಾರ್ಯಕ್ರಮದ ಬಗ್ಗೆ ಶನಿವಾರ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸ್ಲಂಬೋರ್ಡ್ ವತಿಯಿಂದ 477 ಮತ್ತು 988 ಮನೆಗಳ ನಿರ್ಮಾಣ ಆಗಲಿವೆ, ವಾಜಪೇಯಿ ವಸತಿ ಯೋಜನೆ ಹಾಗೂ ಅಂಬೇಡ್ಕರ್ ವಸತಿ ಯೋಜನೆಗಳ ಮೂಲಕ 76 ಮತ್ತು 24 ಮನೆಗಳ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ಮೇ 10 ರಂದು ಮಂಗಳವಾರ ವಸತಿ ಸಚಿವ ವಿ.ಸೋಮಣ್ಣ ನಗರಕ್ಕೆ ಆಗಮಿಸಲಿದ್ದು, ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ ಜಿ+2 ಮಾದರಿಯ 624 ಹಾಗೂ 1248 ಮನೆಗಳ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ ಎಂದು ಶಾಸಕಿ ಪೂರ್ಣಿಮಾ ಮಾಹಿತಿ ನೀಡಿದರು.
ಗ್ರಾಮಾಂತರ ಪ್ರದೇಶದಲ್ಲಿ ಈಗಾಗಲೇ ಮಂಜೂರಾದ 4,448 ಅಲೆಮಾರಿ ಜನಾಂಗಕ್ಕೆ ಮನೆಗಳ ಜೊತೆಗೆ ಹೆಚ್ಚುವರಿಯಾಗಿ 845 ಮನೆಗಳಿಗೆ ಇದೇ ಸಂದರ್ಭದಲ್ಲಿ ಹಕ್ಕುಪತ್ರ ಬಸವ ವಸತಿ ಹಾಗೂ ಅಂಬೇಡ್ಕರ್ ವಸತಿ ಯೋಜನೆಗಳ ಅಡಿಯಲ್ಲಿ ಗ್ರಾಮಾಂತರಕ್ಕೆ 1,200 ಮಂಜೂರಾತಿ ಹಾಗೂ ಹೆಚ್ಚುವರಿ ಬೇಡಿಕೆಯಾಗಿ 1,000 ಮನೆಗಳಿಗೆ ಮನವಿ ಮಾಡಲಾಗುವುದು ಎಂದರಲ್ಲದೆ, ಜವಾಬ್ದಾರಿಯುತ ಶಾಸಕಿಯಾಗಿ ನನ್ನ ಮತದಾರರ ಋಣ ತೀರಿಸಲು ನಮ್ಮ ಸರ್ಕಾರದಿಂದ 8 ಕೋಟಿ ರೂ. ವೆಚ್ಚದ ಸಾರಿಗೆ ಡಿಪೋ ಮಂಜೂರು, 25 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ, ಮಿನಿ ವಿಧಾನಸೌಧಕ್ಕೆ 15 ಕೋಟಿ, ಧರ್ಮಪುರ ಕೆರೆಗೆ ನೀರು ಹರಿಸಲು 90 ಕೋಟಿ ಸೇರಿದಂತೆ ನಗರ ಜನತೆಯ ಅನುಕೂಲಕ್ಕೆ ಯುಜಿಡಿ ಗೆ 206 ಕೋಟಿ ಅತಿ ಶೀಘ್ರದಲ್ಲಿ ಸರ್ಕಾರದಿಂದ ಮಂಜೂರು ಮಾಡಲಾಗುವುದು ಎಂದು ತಿಳಿಸಿದರು.
ಇವೆಲ್ಲವೂ ಸಹ ನಮ್ಮ ಬಿಜೆಪಿ ಸರ್ಕಾರದ ಸಾಧನೆಯಾಗಿದೆ. ಆದ್ದರಿಂದ ನನ್ನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಟೀಕೆ ಮಾಡಲು ಮಾಜಿ ಶಾಸಕರು ಹಾಗೂ ಮಾಜಿ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದಂತಹ ಡಿ. ಸುಧಾಕರ್ ರವರಿಗೆ ಯಾವುದೇ ನೈತಿಕತೆ ಇಲ್ಲ, ಅವರು 10 ವರ್ಷಗಳ ಕಾಲ ಶಾಸಕರಾಗಿ, ಸಚಿವರಾಗಿ ಯಾವ ಬದ್ಧತೆಯಿಂದ ಕೆಲಸ ಮಾಡಿದ್ದಾರೆ, ಅವರು ಜನಪರವಾಗಿ ಅಭಿವೃದ್ಧಿ ಕೆಲಸ ಮಾಡಿದ್ದರೆ ಜನರೇ ಅವರನ್ನು ಆಯ್ಕೆ ಮಾಡುತ್ತಿದ್ದರು ಎಂದರು.
ಜನರ ಮುಂದೆ ಸುಳ್ಳು ಹೇಳಿ ನಾಟಕ ಮಾಡಿದರೆ, ಅದು ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲವೇ, ಮಹಿಳಾ ಶಾಸಕಿಯಾಗಿ ನನ್ನ ಅಲ್ಪ ಅವಧಿಯಲ್ಲಿ ನಾನು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಅವರ ಇಡೀ ರಾಜಕೀಯ ಜೀವನದಲ್ಲೇ ಮಾಡಿಲ್ಲ. ಈ ಕ್ಷೇತ್ರದ ಜನ ನನ್ನ ಮೇಲೆ ಇಟ್ಟಿರುವ ನಂಬಿಕೆ, ವಿಶ್ವಾಸವನ್ನು ನೋಡಿ, ಅಸೂಯೆಯಿಂದ ಮಾಜಿ ಶಾಸಕರು , ಸಚಿವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಮತದಾರರ ಮುಂದೆ ಅವರ ನಾಟಕ ನಡೆಯದು ಎಂದು ತೀವ್ರ ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಕೇಶವಮೂರ್ತಿ, ಮಾಜಿ ಅಧ್ಯಕ್ಷರಾದ ಟಿ.ಚಂದ್ರಶೇಖರ್ ನಗರಸಭಾ ಸದಸ್ಯರಾದ ಮಹೇಶ್ ಪಲ್ಲವ, ಡಿ.ಸಣ್ಣಪ್ಪ, ಗಣೇಶ್ ಕದ್ರು, ಮಾಜಿ ಸದಸ್ಯ ಬಿ.ಕೆ.ಕರಿಯಪ್ಪ, ಚಿರಂಜೀವಿ, ಕೆ.ಪಿ.ಶ್ರೀನಿವಾಸ್ ನಿತ್ಯಾನಂದ ಯಾದವ್, ಓಂಕಾರ್, ಶೋಭಾ, ಸರವಣ, ಘಾಟ್ ರವಿ, ಕೃಷ್ಣಮೂರ್ತಿ, ರಾಜಣ್ಣ ಇತರರು ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್., ಹಿರಿಯೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5