ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ವಿರುದ್ದ ಪೊಲೀಸ್ ಇಲಾಖೆ ಸಲ್ಲಿಸಿರುವ ಆರೋಪ ಪಟ್ಟಿಯ ವಿವರಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಹೈಕೋರ್ಟ್ ಆದೇಶ ನೀಡಿದೆ. ದರ್ಶನ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯವು, ಈ ಆದೇಶವನ್ನು ಉಲ್ಲಂಘಿಸಿದ ಮಾಧ್ಯಮಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ಸೂಚನೆ ನೀಡಿದೆ.
ಆದೇಶದ ಪ್ರತಿಯನ್ನು ಎಲ್ಲಾ ಪ್ರಮುಖ ಮಾಧ್ಯಮಗಳಿಗೂ ಸಹ ರವಾನಿಸುವಂತೆ ಕೋರ್ಟ್ ಸೂಚಿಸಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಮತ್ತು ಗ್ಯಾಂಗ್ ಬಗ್ಗೆ ಆರೋಪ ಪಟ್ಟಿಯಲ್ಲಿ ಇಂಚಿಂಚೂ ಮಾಹಿತಿಯನ್ನು ನೀಡಲಾಗಿತ್ತು. ಆರೋಪಿಗಳ ಸಿಸಿಟಿವಿ ದೃಶ್ಯಾವಳಿಗಳು, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ, ಪೋಸ್ಟ್ ಮಾರ್ಟಮ್ ವರದಿಗಳು ಗ್ಯಾಂಗ್ ನ ಕ್ರೌರ್ಯವನ್ನು ಎಳೆಎಳೆಯಾಗಿ ಬಿಡಿಸಿಟ್ಟಿತ್ತು. ಪೊಲೀಸರು ತನಿಖೆಯಿಂದ ಬಹಿರಂಗಪಡಿಸಿದ್ದ ಈ ಆರೋಪಪಟ್ಟಿಯನ್ನು ಎಲ್ಲಾ ಮಾಧ್ಯಮಗಳೂ ಸಹ ಯಥಾವತ್ತಾಗಿ ಪ್ರಕಟಿಸಿದ್ದವು.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧಿತ ಆರೋಪ ಪಟ್ಟಿಯಲ್ಲಿನ ಗೌಪ್ಯ ಮಾಹಿತಿಯನ್ನು ಪ್ರಸಾರ/ಪ್ರಕಟ/ಹಂಚಿಕೆ ಮಾಡದಂತೆ ವಿದ್ಯುನ್ಮಾನ, ಮುದ್ರಣ & ಸಾಮಾಜಿಕ ಮಾಧ್ಯಮಗಳಿಗೆ ನಿರ್ಬಂಧ” ಹಾಕಲಾಗಿದೆ.
ವಿಚಾರಣೆ ವೇಳೆ ದರ್ಶನ್ ಪರ ವಕೀಲರು, ಸುದ್ದಿ ಮಾಧ್ಯಮಗಳು, ಅದರಲ್ಲೂ ವಿದ್ಯುನ್ಮಾನ ಮಾಧ್ಯಮಗಳು ದಿನಪೂರ್ತಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಸುದ್ದಿಯನ್ನು ಪೂರ್ವಾಗ್ರಹಪೀಡಿತ ಭಾವನೆಯಿಂದ ಪ್ರಸಾರ ಮಾಡುತ್ತಿವೆ. ಪ್ರಸಾರ ಅಥವಾ ಮುದ್ರಣ ಮಾಧ್ಯಮಗಳಲ್ಲಿನ ವರದಿ ಪ್ರಕಟ ಮಾಡುವುದು ಕೇಬಲ್ ಟೆಲಿವಿಷನ್ ನೆಟ್‌ವರ್ಕ್ಸ್ ನಿಯಂತ್ರಣ ಕಾಯಿದೆ ಮತ್ತು ದರ್ಶನ್ ಅವರ ಮೂಲಭೂತ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಆದ್ದರಿಂದ, ಮಾಧ್ಯಮಗಳನ್ನು ಈ ವಿಷಯದಲ್ಲಿ ನಿಯಂತ್ರಿಸಲು ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಆಕ್ಷೇಪಿಸಿದ ಕೇಂದ್ರ ಸರ್ಕಾರದ ಪರ ವಕೀಲರು, ಭಾರತದಲ್ಲಿ ಕನಿಷ್ಠ 2 ಸಾವಿರ ಮಾಧ್ಯಮಗಳಿವೆ. ಇವುಗಳಲ್ಲಿ ನಾವು ಯಾರನ್ನು ನಿಯಂತ್ರಿಸಬೇಕು?. ಅಷ್ಟಕ್ಕೂ, ಇದು ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದು. ಅರ್ಜಿದಾರರು ಹೀಗೆ ಆದೇಶ ಪಡೆಯಲು ಆಗದು. ಒಂದು ವೇಳೆ ಅವರು ನಿರ್ದಿಷ್ಟ ಮಾಧ್ಯಮ ಅಥವಾ ಚಾನೆಲ್ ವಿರುದ್ಧ ನಮಗೆ ದೂರು ನೀಡಿದರೆ ಸಚಿವಾಲಯ ಖಂಡಿತ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಪೀಠಕ್ಕೆ ಸ್ಪಷ್ಟಪಡಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q