ತುಮಕೂರು: ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ಹಾಡುಹಗಲೇ ಪತ್ರಿಕಾ ಸಂಪಾದಕ ರಾಮಾಂಜಿನಪ್ಪ ಅವರ ಮೇಲಿನ ದಾಳಿ ಖಂಡಿಸಿ, ಹಲ್ಲೆ ಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಎಸ್.ಕೃಷ್ಣಮೂರ್ತಿ ಹಾಗೂ ಜಿಲ್ಲಾಧ್ಯಕ್ಷ ಜಿ.ಕರುಣಾಕರ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ನಿಯೋಗದಲ್ಲಿ ತೆರಳಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಎಸ್.ಕೃಷ್ಣಮೂರ್ತಿ ಇತ್ತೀಚಿನ ದಿನಗಳಲ್ಲಿ ಪತ್ರಕರ್ತರ ಮೇಲೆ ನಿರಂತರ ದಾಳಿಗಳು ನಡೆಯುತ್ತಿದ್ದು, ಜಿಲ್ಲೆಯ ಪಾವಗಡದಲ್ಲಿ ನಡೆದಂತಹ ಘಟನೆಯೇ ಇದಕ್ಕೆ ತಾಜಾ ಉದಾಹರಣೆಯಾಗಿದೆ. ಸಂವಿಧಾನದ ನಾಲ್ಕನೇ ಅಂಗವಾಗಿರುವ ಪತ್ರಿಕಾರಂಗದಲ್ಲಿ ಕೆಲಸ ನಿರ್ವಹಿಸುತ್ತಿರುವ ಪತ್ರಕರ್ತರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದರು.
ಪಾವಗಡ ಪಟ್ಟಣದಲ್ಲಿ ಸೋಮವಾರ ರಾಮಾಂಜಿನಪ್ಪ ಅವರ ಮೇಲೆ ಹಲ್ಲೆ ಮಾಡಿದವರನ್ನು ಜಿಲ್ಲೆಯಿಂದಲೇ ಗಡಿಪಾರು ಮಾಡಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಜಿ.ಕರುಣಾಕರ ಮಾತನಾಡಿ, ಸಮಾಜದ ಆಗು ಹೋಗುಗಳನ್ನು ಮಾಧ್ಯಮದ ಮೂಲಕ ಬಿತ್ತರಿಸಿ, ಬೆಳಕು ಚೆಲ್ಲುವ ಪತ್ರಕರ್ತರಿಗೆ ಇಂದು ರಕ್ಷಣೆ ಅಗತ್ಯವಾಗಿ ಬೇಕಾಗಿದೆ. ರಾಮಾಂಜಿನಪ್ಪ ಅವರ ಮೇಲೆ ನಡೆದ ದಾಳಿ ಖಂಡನೀಯ.
ಕೂಡಲೇ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಿ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಪೊಲೀಸರು ಎಚ್ಚರ ವಹಿಸಬೇಕೆಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಎಸ್ಪಿ ಕೆ.ವಿ.ಅಶೋಕ್, ರಾಮಾಂಜಿನಪ್ಪ ಅವರ ಮೇಲೆ ಹಲ್ಲೆ ಮಾಡಿರುವವರನ್ನು ಈಗಾಗಲೇ ಬಂಧಿಸಿದ್ದು, ಎಫ್ ಐಆರ್ ಕೂಡ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಸಿ.ರಂಗನಾಥ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎನ್.ಮಂಜುನಾಥಗೌಡ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿ.ಎನ್.ಮಹೇಶ್ಕುಮಾರ್, ಪತ್ರಕರ್ತರಾದ ಅಕ್ಷಯ್ ಚೌದರಿ, ಶಶಿ ದೋಣಿಹಕ್ಲು, ಹರ್ಷ, ಯಶ್, ಮಹೇಶ್, ಈಶ್ವರ್, ಸತೀಶ್, ಹೇಮಂತ್, ವಿಜಯ್, ರಮೇಶ್ಬಾಬು, ವಿಠ್ಠಲ್, ರಾಕೇಶ್ ಸೇರಿದಂತೆ ಹಲವು ಪತ್ರಕರ್ತರು ಭಾಗವಹಿಸಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx