ತೆಲಂಗಾಣ: ಇಬ್ಬರು ಪತ್ನಿಯರಿದ್ದರೂ ತನ್ನ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದ ವ್ಯಕ್ತಿಯನ್ನು ಇಬ್ಬರು ಪತ್ನಿಯರು ಸೇರಿ ಮರ್ಮಾಂಗಕ್ಕೆ ಕಲ್ಲಿನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ತೆಲಂಗಾಣದ ಸೂರ್ಯಪೇಟೆಯಲ್ಲಿ ನಡೆದಿದೆ.
ಜಿಲ್ಲೆಯ ಚಿವ್ವೆನ್ಲಾ ತಾಲ್ಲೂಕಿನ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ವೃತ್ತಿಯಲ್ಲಿ ಚಾಲಕನಾಗಿರುವ 43 ವರ್ಷದ ವ್ಯಕ್ತಿ ಹಲವು ವರ್ಷಗಳ ಹಿಂದೆ ನಲ್ಗೊಂಡ ಜಿಲ್ಲೆಯ ಯುವತಿಯನ್ನು ಮದುವೆಯಾಗಿದ್ದ. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಜನಿಸಿದ್ದರು. ಗಂಡು ಮಗು ಬೇಕು ಎನ್ನುವ ನೆಪದಲ್ಲಿ ತನ್ನ ಮೊದಲ ಪತ್ನಿಯ ತಂಗಿಯನ್ನೂ ಈತನೇ ವಿವಾಹವಾಗಿದ್ದ. ಆಕೆಗೆ ಗಂಡು ಮಗು ಜನಿಸಿದ್ದು, ಎಲ್ಲರೂ ಒಂದೇ ಕುಟುಂಬದಲ್ಲಿ ಜೊತೆಯಾಗಿ ವಾಸವಿದ್ದರು.
ಕೆಲವು ತಿಂಗಳ ಹಿಂದೆ ತನ್ನ ಮೊದಲ ಪತ್ನಿಯ ಕಿರಿ ಮಗಳು ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಳು. ಹಿರಿ ಮಗಳು ಹೈದರಾಬಾದ್ ನಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾಳೆ. ಕಿರಿ ಮಗಳ ಸಾವಿನ ನಂತರ ಆರೋಪಿ ಮದ್ಯದ ಚಟಕ್ಕೆ ದಾಸನಾಗಿದ್ದ. ಅಂದಿನಿಂದ ಆತನ ನಡವಳಿಕೆ ಬದಲಾಗುತ್ತಾ ಸಾಗಿದೆ. ಇಬ್ಬರು ಪತ್ನಿಯರಿಗೆ ಮಾನಸಿಕ, ದೈಹಿಕ ಹಿಂಸೆ ನೀಡಲು ಪ್ರಾರಂಭಿಸಿದ. ಇದರಿಂದ ಪತ್ನಿಯರು ಸಾಕಷ್ಟು ಮನನೊಂದಿದ್ದರು. ಹಿರಿ ಮಗಳ ಜೊತೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದಾನೆ. ದಿನ ಕಳೆದಂತೆ ಆಕೆಗೆ ಲೈಂಗಿಕ ಕಿರುಕುಳ ನೀಡಲೂ ಶುರು ಮಾಡಿದ್ದಾನೆ.
ಹೈದರಾಬಾದ್ ನಲ್ಲಿ ನೆಲೆಸಿದ್ದ ಮಗಳು ಸಂಕ್ರಾಂತಿ ಹಬ್ಬಕ್ಕೆ ಸಿಕ್ಕ ರಜೆಗಾಗಿ ಊರಿಗೆ ಬಂದಿದ್ದಳು. ಹೀಗೆ ಬಂದ ಮಗಳೊಂದಿಗೆ ತಂದೆ ಅನುಚಿತವಾಗಿ ವರ್ತಿಸಲು ಶುರು ಮಾಡಿದ್ದಾನೆ. ಪತ್ನಿಯರು ಆತನ ಬಳಿ ನಿನ್ನ ನಡವಳಿಕೆ ಬದಲಿಸಿಕೊ ಎಂದು ಹೇಳಿದರೂ ನಿರ್ಲಕ್ಷಿಸಿದ್ದಾನೆ. ಇದರಿಂದ ತಾಯಿ ಮತ್ತು ಮಗಳು ಆತ್ಮಹತ್ಯೆ ಮಾಡಿಕೊಳ್ಳಲೂ ನಿರ್ಧರಿಸಿದ್ದರಂತೆ. ಆದರೆ, ಅದೇ ದಿನ ವ್ಯಕ್ತಿಯು ತನ್ನ ಮಗಳೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಬೇಸತ್ತು ಇಬ್ಬರು ಪತ್ನಿಯರು ಸೇರಿ ಆತನ ಮರ್ಮಾಂಗವನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಸದ್ಯ ಮೃತನ ಸಹೋದರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx