ತುಮಕೂರು: ನಮ್ಮ ಜೀವನ ಕ್ರಮವನ್ನು ಮುಂದಿನ ಪೀಳಿಗೆಗೆ ಸಾಗಿಸುವ ಸಂಪರ್ಕ ಸೇತುವೆಯೇ ಜಾನಪದ. ಜಾನಪದ ನಿಂತ ನೀರಲ್ಲ, ಕಾಲಕ್ಕೆ ತಕ್ಕಂತೆ ಬದಲಾಗುವ ತೊರೆಯಾಗಿದೆ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಹೆಚ್.ಎಲ್. ಪುಷ್ಪಅಭಿಪ್ರಾಯಪಟ್ಟರು.
ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು ವತಿಯಿಂದ ಶನಿವಾರ ಆಯೋಜಿಸಿದ್ದ ‘ಜಾನಪದ ನಡೆ ವಿದ್ಯಾರ್ಥಿಗಳ ಕಡೆ ಎಂಬ ವಿಚಾರ ಸಂಕಿರಣ ಮತ್ತು ಜಾಣಜಾಣೆಯರ ಜಾನಪದ ಗಾಯನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಶ್ವದ ಬೇರೆಲ್ಲಾ ಕಲೆಗಳಿಗಿಂತ ಜಾನಪದ ಕಲೆ ವಿಭಿನ್ನವಾದದ್ದು, ಪ್ರಸ್ತುತ ಜಾನಪದ ಕಲೆಯ ಅನಿವಾರ್ಯತೆ ಮತ್ತು ಅವಶ್ಯಕತೆಗಳನ್ನು ಯುವ ಪೀಳಿಗೆ ಅರಿಯಬೇಕು. ಜಾನಪದ ಹಾಡುಗಳು ನಮ್ಮ ಬದುಕಿನ ಎಲ್ಲಾ ಆಯಾಮಗಳನ್ನು ಕಟ್ಟಿಕೊಡುತ್ತವೆ. ಜಾನಪದವನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಕೆಲಸ ನಡೆಯಬೇಕಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಪ್ರಭು.ಜಿ. ಮಾತನಾಡಿ, ಕವಿವಾಣಿ ಹೂ, ಜನವಾಣಿ ಬೇರು, ಇವೆರಡೂ ನಮ್ಮ ಸಂಸ್ಕೃತಿಯ ಮೂಲ. ಜ್ಞಾನ ಸಂಪಾದನೆ ಸಿದ್ದಿಸುವುದು ಜಾನಪದದಿಂದ ಮಾತ್ರ. ನಮ್ಮ ವ್ಯಕ್ತಿತ್ವವನ್ನುರೂಪಿಸುವಲ್ಲಿ ಇವುಗಳ ಪಾತ್ರದೊಡ್ಡದು ಎಂದರು.
ವೃತ್ತಿಪರತೆಗೆ ವಿಜ್ಞಾನ, ಮೌಲ್ಯಯುತವಾದ ಜೀವನಕ್ಕೆ ಜ್ಞಾನ. ಇವೆರಡೂ ಅವಶ್ಯಕ.ಇವೆರಡೂ ಬರುವುದು ನಮ್ಮ ಪರಿಸರ, ಸಂಸ್ಕೃತಿ ಹಾಗೂ ಜಾನಪದ ಆಚರಣೆಯಿಂದ. ಶಿಷ್ಟ ಶಿಕ್ಷಣ, ಬಾಹ್ಯಜ್ಞಾನ ಹಾಗೂ ಜನವಾಣಿ ಇವು ಯಶಸ್ವಿ ವ್ಯಕ್ತಿಯ ಮಾರ್ಗದರ್ಶಕಗಳಾಗಿವೆ ಎಂದು ಹೇಳಿದರು.
ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಗೊಲ್ಲಹಳ್ಳಿ ಶಿವಪ್ರಕಾಶ್ ಮಾತನಾಡಿ ಸ್ವ ಹಿತಾಸಕ್ತಿಗಾಗಿ ಬದುಕಿದವರು ಸ್ವಾವಲಂಬಿಯಾಗುತ್ತಾರೆ. ಇತರರಿಗಾಗಿ ಬದುಕಿದವರು ಇತಿಹಾಸವಾಗುತ್ತಾರೆ. ಸಾಧಕರಿಗೆ ಸಾವಿಲ್ಲಎಂಬುದನ್ನು ಬುದ್ಧ, ಬಸವ ಮತ್ತು ಅನೇಕ ಸಂತರು ನಮಗೆಲ್ಲರಿಗೂ ತೋರಿಸಿಕೊಟ್ಟಿದ್ದಾರೆ. ಜಾನಪದಕ್ಕೆಒಗ್ಗಿಕೊಂಡವರು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಪಡೆಯುತ್ತಾರೆ ಎಂದರು.
‘ಜಾನಪದ ಕಲೆ ಉಳಿಯುವಿಕೆಯಲ್ಲಿ ಯುವಕರ ಪಾತ್ರ’ ಎಂಬ ವಿಷಯದ ಕುರಿತು ಹಿರಿಯ ಜಾನಪದ ತಜ್ಞ ಸಣ್ಣನಾಗಪ್ಪ ಮಾತನಾಡಿದರು. ಕಲಾವಿದರು ಜಾನಪದ ಗಾಯನ ನಡೆಸಿಕೊಟ್ಟರು. ಆನಂದ ಮಾದಲಗೆರೆ ಹಾಗೂ ಜಲಧಿರಾಜು ಅವರಿಗೆ ಸನ್ಮಾನ ಮಾಡಲಾಯಿತು.
ತುಮಕೂರು ವಿವಿಯ ಕುಲಸಚಿವೆ ನಾಹಿದಾ ಜಮ್ ಜಮ್, ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟ್ರಾರ್ ನಮ್ರತ ಎನ್, ಸದಸ್ಯ ಮಲ್ಲಿಕಾರ್ಜುನ ಕೆಂಕೆರೆ, ವಿವಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಪ್ರಕಾಶ್ ಶೇಟ್, ಡಾ.ವೆಂಕಟರೆಡ್ಡಿರಾಮರೆಡ್ಡಿ, ಡಾ.ನಾಗಭೂಷಣ ಬಗ್ಗನಡು, ಡಾ.ರಾಮಕೃಷ್ಣಜಿ. ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx