ಮಧುಗಿರಿ: ಮಾದಿಗ ಸಮಾಜ ಒಳಮೀಸಲಾತಿಗಾಗಿ 3 ದಶಕದಿಂದ ನಿರಂತರ ಹೋರಾಟ ಮಾಡುತ್ತಿದೆ . ಮೀಸಲಾತಿ ವಂಚಿತರ ಕಣ್ಣೀರು ಒರೆಸುವ ಬದಲು ಕರ್ನಾಟಕ ಸರ್ಕಾರ ಕಣ್ಣಿಗೆ ಮಣ್ಣೆರುಚುವ ಹೊಸ ಆಯೋಗ ಮಾಡಲು ಹೊರಟಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಮಧುಗಿರಿ ಜಿಲ್ಲೆ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಎಸ್.ಆರ್. ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಗಸ್ಟ್ 1 ರಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ನಂತರವೂ ಕರ್ನಾಟಕದಲ್ಲಿ ನಿರಂತರ ಹೋರಾಟ ನಡೆದಿದೆ. ಹೊಸದೊಂದು ಆಯೋಗ ರಚಿಸಿ ಅನ್ನುವ ಬೇಡಿಕೆ ಮಾದಿಗ ಸಮಾಜದಿಂದ ಬಂದಿರಲೇ ಇಲ್ಲ . ಹೊಸ ಆಯೋಗ ರಚಿಸಿ ಎಂದು ಮಾದಿಗ ಸಮಾಜದ ಯಾವ ಹೋರಾಟಗಾರರೂ ಬೇಡಿಕೆ ಸಲ್ಲಿಸಿರಲಿಲ್ಲ . ಹೊಸ ಆಯೋಗ ರಚಿಸುವ ಹಿಂದೆ ದೊಡ್ಡ ಹುನ್ನಾರವಿದೆ . ಕಾಲಹರಣ ಮಾಡಿ ಸಂತ್ರಸ್ತ ದಲಿತರನ್ನು ವಂಚಿಸುವ ಉದ್ದೇಶದಿಂದಲೇ ಆಯೋಗ ರಚಿಸುವ ನಾಟಕ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಸುಪ್ರೀಂಕೋರ್ಟಿನ ತೀರ್ಪು ಬಂದು 3 ತಿಂಗಳಾದರು ಕಾಂಗ್ರೆಸ್ ಸರ್ಕಾರ ಒಳಮೀಸಲಾತಿಯ ಬೇಡಿಕೆಯನ್ನು ನಿರ್ಲಕ್ಷಿಸುತ್ತಾ ಬಂದಿತ್ತು . ಈಗ ಉಪಚುನಾವಣೆಯ ಓಟಿನ ಆಸೆಗೆ ಬಿದ್ದು ಈ ಕಾಟಾಚಾರದ ನಿರ್ಣಯ ಘೋಷಿಸಿದೆ ಎಂದು ಅವರು ಹೇಳಿದರು.
ಸರ್ಕಾರದ ಈ ನಿರ್ಧಾರವನ್ನು ನಾವು ಒಪ್ಪುವುದಿಲ್ಲ. ಜನಸಂಖ್ಯೆಯ ದತ್ತಾಂಶದ ಕ್ಯಾತೆ ತೆಗೆಯುವವರು ಸುಪ್ರೀಂಕೋರ್ಟಿನ ತೀರ್ಪು ಬರುವರೆಗೂ ಸುದ್ದಿಯಲ್ಲೇ ಇರಲಿಲ್ಲ . ಸದಾಶಿವ ಆಯೋಗಕ್ಕೆ , ಮಾಧುಸ್ವಾಮಿ ಸಮಿತಿಗೆ ಅಂದೇ ಮನವಿ ಸಲ್ಲಿಸಬಹುದಿತ್ತು . ಈ ಕ್ಯಾತೆ ತೆಗೆಯುವವರ ಹಿಂದೆ ರಾಜಕೀಯ ಹಿತಾಸಕ್ತಿ ಆಡಗಿದೆ . ಡಾ ಮಹದೇವಪ್ಪ ಮತ್ತು ಪ್ರಿಯಾಂಕ ಖರ್ಗೆ ಅವರ ತಾಳಕ್ಕೆ ಕುಣಿಯುವ ಮುಖ್ಯಮಂತ್ರಿಗಳು ಮಾದಿಗ ಸಮಾಜಕ್ಕೆ ಮತ್ತೆ ಮೋಸ ಮಾಡಿದ್ದಾರೆ . ಇವರಿಗೆ ಬರಲಿರುವ ಮೂರು ಉಪಚುನಾವಣೆಯಲ್ಲಿ ಸೋಲಿಸಿ ಪಾಠ ಕಲಿಸಲಾಗುವುದು ಎಂದು ಅವರು ಹೇಳಿದರು.
ವರದಿ: ನಂದೀಶ್ ನಾಯ್ಕ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296