ಗುಬ್ಬಿ (ತುಮಕೂರು): ತಾಲ್ಲೂಕಿನ ಅಂಬಾರಪುರ ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದ ಚಿರತೆಯೊಂದು ಕೊನೆಗೂ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.
ಅಂಬಾರಪುರ ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆ ಹಾವಳಿ ಮಿತಿಮೀರಿತ್ತು. ಇದರಿಂದಾಗಿ ಗ್ರಾಮಸ್ಥರು ಸಂಜೆ ವೇಳೆಗೆ ಮನೆಯಿಂದ ಹೊರಬರಲು ಹಾಗೂ ತಮ್ಮ ದನಕರುಗಳನ್ನು ಮೇಯಿಸಲು ತೀವ್ರ ಭಯಭೀತರಾಗಿದ್ದರು. ಗ್ರಾಮಸ್ಥರ ನಿರಂತರ ಒತ್ತಾಯ ಮತ್ತು ಮನವಿಗೆ ಸ್ಪಂದಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಚಿರತೆ ಸಂಚರಿಸುವ ಆಯಕಟ್ಟಿನ ಜಾಗದಲ್ಲಿ ಬೋನು ಇರಿಸಿದ್ದರು.
ಭಾನುವಾರ ಬೆಳಗಿನ ಜಾವ ಸುಮಾರು 3 ವರ್ಷದ ಹೆಣ್ಣು ಚಿರತೆಯು ಆಹಾರದ ಆಮಿಷಕ್ಕೆ ಒಳಗಾಗಿ ಬೋನಿನಲ್ಲಿ ಸೆರೆಯಾಗಿದೆ. ಬೆಳಿಗ್ಗೆ ಚಿರತೆ ಬೋನಿಗೆ ಬಿದ್ದ ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸೆರೆಯಾದ ಚಿರತೆಯನ್ನು ಸುರಕ್ಷಿತವಾಗಿ ಬೋನಿನ ಸಮೇತ ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ. ಚಿರತೆ ಸೆರೆಯಾಗಿರುವುದರಿಂದ ಅಂಬಾರಪುರ ಗ್ರಾಮದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


