1996ರಲ್ಲಿ ಗುಡಿಸಲಿನಿಂದ ಪ್ರಾರಂಭವಾದ ಶಾಲೆಯಿಂದ ಪಾಠವನ್ನು ಕಲಿತ ವಿದ್ಯಾರ್ಥಿಗಳು ಈ ದಿನ ಶಿಕ್ಷಣ ಇಲಾಖೆ, ಪತ್ರಿಕೋದ್ಯಮ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಇಂಜಿನಿಯರಿಂಗ್ ಮತ್ತು ವಿವಿಧ ಕ್ಷೇತ್ರಗಳಲ್ಲ್ಲಿ ಕೆಲಸ ನಿರ್ವಹಿಸುತ್ತಿರುವುದು ಈ ಶಾಲೆಯ ಉತ್ತಮ ಶಿಕ್ಷಣಕ್ಕೆ ಹಿಡಿದ ಕೈಗನ್ನಡಿ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದ್ದಾರೆ.
ಬಾಚೇನಹಳ್ಳಿ ಶಾಲೆಯಲ್ಲಿ ಗುರುವಂದನಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟನೆ ಮಾಡಿ, ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಭದ್ರ ಭವಿಷ್ಯಕ್ಕೆ ಸುಭದ್ರ ಬುನಾದಿ ಹಾಕುವಲ್ಲಿ ಶಿಕ್ಷಕರ ಪಾತ್ರ ಅತಿಮುಖ್ಯವಾಗಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣ ಹಂತದಲ್ಲಿ ಬರುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಶಿಕ್ಷಕರ ಪಾತ್ರ ಅನನ್ಯವಾಗಿದೆ. ಭವಿಷ್ಯ ರೂಪಿಸುವ ಶಿಕ್ಷಕರನ್ನು ನೆನಪಿಸಿಕೊಂಡು ಗೌರವಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಆದ್ಯ ಕರ್ತವ್ಯವಾಗಿದೆ ಎಂದರು.
ಗುರು–ಶಿಷ್ಯರ ಸಂಬಂಧ ಕಟ್ಟಿಕೊಡುವ ಪ್ರತಿಯೊಬ್ಬ ಗುರುವೂ, ತನ್ನ ಶಿಷ್ಯತನಗಿಂತ ಪಾಂಡಿತ್ಯಪೂರ್ಣ ವಿದ್ಯಾಂಸರಾಗಬೇಕೆಂದು ಬಯಸುತ್ತಾರೆ. ಈ ನಿಟ್ಟಿನಲ್ಲಿ ಈ ಗುರುವಂದನಾ ಕಾರ್ಯಕ್ರಮವು ಅತ್ಯಂತ ಔಚಿತ್ಯಪೂರ್ಣವಾಗಿದೆ. ಗುರು–ಶಿಷ್ಯರ ಸಂಬಂಧವನ್ನು ಗಟ್ಟಿಗೊಳಿಸುವ ಈ ಕಾರ್ಯಕ್ರಮ ಯುವ ಪೀಳಿಗೆಗೂ ಸ್ಪೂರ್ತಿದಾಯಕವಾಗಲಿದೆ ಎಂದು ಶಾಲೆಯ ಮುಖ್ಯೋಪಾದ್ಯಾಯರಾದ ಎನ್.ಜಿ.ಉಮಾದೇವಿ ಭಾವನಾತ್ಮಕವಾಗಿ ಮಾತನಾಡಿ ಹಿತ ವಚನ ನುಡಿದರು.
1996 ರಿಂದ ವಿದ್ಯಾರ್ಥಿಗಳಿಗೆ ಪಾಠವನ್ನು ಮಾಡಿದಂತಹ ಶಿಕ್ಷಕರಿಂದ ಹಿಡಿದು 2024ರ ವರೆಗೂ ಪಾಠ ಮಾಡಿ ವರ್ಗಾವಣೆ ಮತ್ತು ನಿವೃತ್ತಿ ಪಡೆದ ಶಿಕ್ಷಕರಿಗೆ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ 26 ಕ್ಕೂ ಹೆಚ್ಚು ಶಿಕ್ಷಕರು ಭಾಗಿಯಾಗಿದ್ದರು. ಇನ್ನು ಶಾಲೆಯ ಹಿರಿಯ ವಿದ್ಯಾರ್ಥಿ–ವಿದ್ಯಾರ್ಥಿನಿಯರು ಸೇರಿ ಶಿಕ್ಷಕರನ್ನ ಪ್ರೀತಿಯ ಹೂಮಳೆಗರದು ಬರಮಾಡಿಕೊಂಡರು.
ಸನ್ಮಾನ ಸ್ವೀಕರಿಸಿದ ಗುರುಗಳು ಅವರ ಅನಿಸಿಕೆಗಳನ್ನು ಹಂಚಿಕೊಂಡರು. ನಂತರ ವಿದ್ಯಾರ್ಥಿಗಳು ಕೂಡಾ ತಮ್ಮ ತಮ್ಮ ಅನಿಸಿಕೆಗಳನ್ನು ಮುಂದಿಟ್ಟರು. ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನವೂ ನಡೆದು, ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಗುರುವಂದನಾ ಕಾರ್ಯಕ್ರಮದ ಯಶಸ್ಸಿಗೆ ಮಾಗದರ್ಶನ ಮತ್ತು ಸಹಕಾರ ನೀಡಿದ ಎಚ್.ಬಿ. ಮೋಹನ್ ಕುಮಾರ್ ಬಿ ಇ ಒ, ಮಂಜುನಾಥ್ ಗ್ರಾ.ಪಂ. ಅಧ್ಯಕ್ಷರು, ಕಲ್ಯಾಣ್ ಕುಮಾರ್ ಸದಸ್ಯರು ನಗರ ಸಭೆ, ಪುಟ್ಟಸ್ವಾಮಿಗೌಡ, ಎಸ್.ಡಿ.ಎಂ.ಸಿ. ಸದಸ್ಯರು ಮತ್ತು ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಮೋಹನ್ ಕುಮಾರ್, ದೇವರಾಜು, ದಿಲೀಪ್, ಆನಂದಕುಮಾರ್, ತೇಜೇಶ್, ಸುರೇಶ್, ಅರುಣ್ಕುಮಾರ್ ಮತ್ತು ಇನ್ನೂ ಹಲವು ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಬ್ಬದ ವಾತಾವರಣವನ್ನೇ ಸೃಷ್ಟಿಸಿದ ಎಲ್ಲರಿಗೂ, ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದ ಹಿರಿಯ ವಿದ್ಯಾರ್ಥಿ ಸಿದ್ದೇಶ್ ಜೆ.ಆರ್., ತಮ್ಮ ತಂಡದಲ್ಲಿ ಕೆಲಸ ಮಾಡಿದ ಎಲ್ಲಾ ಸ್ನೇಹಿತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಶಾಲೆಯ ಪರವಾಗಿ ಹಾಗೂ ವೈಯಕ್ತಿಕವಾಗಿ ಧನ್ಯವಾದಗಳನ್ನು ತಿಳಿಸಿದರು.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx