ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಸಂಜನಾ ಹಾಗೂ ಸೃಷ್ಠಿ ವಿ.ಆರ್. ಅವರು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕಗಳನ್ನು ಪಡೆದು ನಮ್ಮ ಹಿರಿಯೂರು ತಾಲ್ಲೂಕಿಗೆ , ಜಿಲ್ಲೆಗೆ , ರಾಜ್ಯಕ್ಕೆ ಪ್ರಥಮ ಸ್ಥಾನಗಳಿಸಿದ್ದಾರೆ.
ಸಂಜನಾ ರಾಷ್ಟ್ರೀಯ ಅಕಾಡೆಮಿ ಸ್ಕೂಲ್ ನ ವಿದ್ಯಾರ್ಥಿನಿಯಾಗಿದ್ದು, ಸೃಷ್ಠಿ ವಿ ಆರ್ ಅವರು ಮಸ್ಕಲ್ ಗ್ರಾಮದ ಬೀಮನಬಂಡೆ ಯಜ್ಞ ವಾಲ್ಕ್ಯ ಶಾಲೆಯ ವಿದ್ಯಾರ್ಥಿನಿಯಾಗಿದ್ದಾರೆ.
ಸಂಜನಾ ಮತ್ತು ಸಂಜನಾ ತಾಯಿ
ಸಂಜನಾ ಹಾಗೂ ಸೃಷ್ಠಿ ವಿ ಆರ್ ಅವರು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಕನಸು ಕಂಡಿದ್ದರು. ಅವರ ಕನಸು ಶಾಲಾ ಶಿಕ್ಷಕರ ಸಹಕಾರ ಹಾಗೂ ಕುಟುಂಬಸ್ಥರ ಪ್ರೋತ್ಸಾಹದೊಂದಿಗೆ ಇಂದು ನೆರವೇರಿದೆ.
ಇನ್ನೂ ತಮ್ಮ ಸಾಧನೆಯ ಕುರಿತಾಗಿ ನಮ್ಮ ತುಮಕೂರು ಮಾಧ್ಯಮದ ಜೊತೆಗೆ ಮಾತನಾಡಿದ ಸಂಜನಾ ಹಾಗೂ ಸೃಷ್ಠಿ ವಿ ಆರ್ ಅವರು, ವಾರ್ಷಿಕ ಪರೀಕ್ಷೆ ರೀತಿಯಲ್ಲಿಯೇ ಆಗಾಗ ಕಿರುಪರೀಕ್ಷೆ ನಡೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಬಗ್ಗೆ ಶಿಕ್ಷಕರು ನಮಗೆ ಆತ್ಮಸ್ಥೈರ್ಯ ಮೂಡಿಸಿದ್ದರು. ಶಾಲಾ ಶಿಕ್ಷಕರ ಈ ಪ್ರೋತ್ಸಾಹವೇ ನಮ್ಮ ಸಾಧನೆಗೆ ಕಾರಣ ಎಂದರು.
ಸೃಷ್ಠಿ ವಿ ಆರ್ ಮಾತನಾಡಿ, ನಾನು ರೋಹಿಣಿ ಸಿಂಧೂರಿ ಅವರ ಹಾಗೆ ಪ್ರಾಮಾಣಿಕ ಜಿಲ್ಲಾಧಿಕಾರಿಯಾಗುವ ಕನಸನ್ನು ಕಂಡಿದ್ದು, ಇದಕ್ಕೆ ನನ್ನ ಅಜ್ಜ ಅಜ್ಜಿ ಅಪ್ಪ ಅಮ್ಮ ಎಲ್ಲಾರು ಸಹ ನನಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ಹೇಳಿದರು.
ಸೃಷ್ಠಿ ವಿ.ಆರ್.ಮತ್ತು ಅವರ ತಾಯಿ ಸರ್ವಮಂಗಳ
ಇದೇ ವೇಳೆ ಸಂಜನಾ ಅವರು ಮಾತನಾಡಿ, ನಾನು ವೈದ್ಯಕೀಯ ಕ್ಷೇತ್ರದಲ್ಲಿ ಡಾಕ್ಟರ್ ಆಗಿ ಬಡ ಜನಗಳಿಗೆ ಸೇವೆ ಸಲ್ಲಿಸುವ ಕನಸು ಕಂಡಿದ್ದೇನೆ ಇದಕ್ಕೆ ನಮ್ಮ ತಂದೆ ತಾಯಿ ಇಬ್ಬರೂ ಸಹ ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ ಎಂದರು..
ಸಂಜನಾ ಹಾಗೂ ಸೃಷ್ಠಿ ವಿ ಆರ್ ಇಬ್ಬರೂ ಸಹ ಸಾಮಾನ್ಯ ರೈತರ ಮಕ್ಕಳಾಗಿದ್ದು, ಇದೀಗ ನಮ್ಮ ರಾಜ್ಯಕ್ಕೆ ಜಿಲ್ಲೆಗೆ ತಾಲ್ಲೂಕಿಗೆ ಕೀರ್ತಿಯನ್ನು ತಂದು ಕೊಡುವುದರ ಮೂಲಕ ನಮ್ಮ ಹಿರಿಯೂರು ತಾಲ್ಲೂಕಿನ ಕೀರ್ತಿಯನ್ನು ಎತ್ತಿ ಹಿಡಿದಿದ್ದಾರೆ .
ಇನ್ನೂ ಮಕ್ಕಳ ಸಾಧನೆಯ ಬಗ್ಗೆ ಸೃಷ್ಠಿ ಹಾಗೂ ಸಂಜನಾ ಪೋಷಕರು ಸಂಭ್ರಮ ಹಂಚಿಕೊಂಡರು. ಇದೇ ವೇಳೆ ಸಾಧನೆ ತೋರಿದ ವಿದ್ಯಾರ್ಥಿನಿಯರ ಮನೆಗೆ ಕೇಂದ್ರ ಸಚಿವರಾದ ನಾರಾಯಣಸ್ವಾಮಿ, ಸ್ಥಳೀಯ ಶಾಸಕರಾದ ಕೆ.ಪೂರ್ಣಿಮಾಶ್ರೀನಿವಾಸ್, ಬಿಜೆಪಿ ಪಕ್ಷದ ಪ್ರವರ್ಗ -1ರ ರಾಜ್ಯಾಧ್ಯಕ್ಷರಾದ ಡಿ.ಟಿ.ಶ್ರೀನಿವಾಸ್, ಮಾಜಿ ಶಾಸಕರಾದ ಡಿ. ಸುಧಾಕರ್, ಯಜ್ಞಾವಾಲ್ಕ್ಯ ಶಾಲೆಯ ಮುಖ್ಯೋಪಾಧ್ಯಾಯಿನಿ ರಂಜಿನಿ ಅವರು ಭೇಟಿ ನೀಡಿ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಿದರು.
ವರದಿ: ಮುರುಳಿಧರನ್ ಆರ್., ಹಿರಿಯೂರು.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5