ಹಿರಿಯೂರು: ಸರ್ಕಾರ ಹೊರಗುತ್ತಿಗೆದಾರ ನೌಕರರನ್ನು ಖಾಯಂಗೊಳಿಸಲು ಒತ್ತಾಯಿಸಿ, ನಗರಸಭೆ ಆವರಣದಲ್ಲಿ ಪೌರಕಾರ್ಮಿಕರ ಅಧ್ಯಕ್ಷರಾದ ದುರ್ಗೇಶ್ ಅಧ್ಯಕ್ಷತೆಯಲ್ಲಿ ಹಿರಿಯೂರು ನಗರಸಭೆಯ ಗುತ್ತಿಗೆ ನೌಕರರಿಂದ ಬೃಹತ್ ಪ್ರತಿಭಟನೆ ನಡೆಸಿದರು.
ನಗರಸಭಾ ಸಂಸ್ಥೆಯಲ್ಲಿ ಹೊರಗುತ್ತಿಗೆ ಪದ್ಧತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಾಹನ ಚಾಲಕರು, ಡಾಟಾ ಎಂಟ್ರಿ ಆಪರೇಟರ್ ಗಳು, ವಾಟರ್ ಮ್ಯಾನ್ ಗಳನ್ನು ಸರ್ಕಾರ ಖಾಯಂಗೊಳಿಸಬೇಕು ಎಂಬುದಾಗಿ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷರಾದ ಆರ್.ಎಲ್.ರಾಜಶೇಖರ್ ರವರನ್ನು ಒತ್ತಾಯಿಸಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ನಗರಸಭೆ ಆವರಣದಲ್ಲಿ ಕರ್ನಾಟಕ ರಾಜ್ಯ ಪೌರನೌಕರರ ಸಂಘ, ಹಿರಿಯೂರು ಸಮಿತಿ ಹಾಗೂ ಕರ್ನಾಟಕ ರಾಜ್ಯ ಹೊರಗುತ್ತಿಗೆ ನೌಕರರ ಸಂಘ ಹಿರಿಯೂರು ಶಾಖೆಯ ನೇತೃತ್ವದಲ್ಲಿ ಜುಲೈ 1 ಶುಕ್ರವಾರದಿಂದ ರಾಜ್ಯಾದ್ಯಂತ ನಗರ ನೈರ್ಮಲ್ಯ, ಸ್ವಚ್ಛತೆ ಸ್ಥಗಿತಗೊಳಿಸಿ, ಹಮ್ಮಿಕೊಳ್ಳಲಾಗಿದ್ದ ಅನಿರ್ಧಿಷ್ಟಾವಧಿ ಪ್ರತಿಭಟನೆಯಲ್ಲಿ ಪೌರಕಾರ್ಮಿಕರು, ವಾಹನ ಚಾಲಕರು, ಡಾಟಾ ಎಂಟ್ರಿ ಆಪರೇಟರ್ ಗಳು, ವಾಟರ್ ಮ್ಯಾನ್ ಗಳು ಭಾಗವಹಿಸಿದ್ದರು.
ಇದೇ ವೇಳೆ ನಮ್ಮ ತುಮಕೂರು ಜೊತೆಗೆ ಮಾತನಾಡಿದ ಪ್ರತಿಭಟನಾಕಾರರು, ನಾವುಗಳು ಗುತ್ತಿಗೆ ನೌಕರರಾಗಿ ಸುಮಾರು 10-15 ವರ್ಷಗಳ ಕಾಲ ಸೇವೆ ಸಲ್ಲಿಸುತ್ತ ಬಂದಿದ್ದೇವೆ. ನಮಗೆ ಏಜೆನ್ಸಿ ಗುತ್ತಿಗೆದಾರರಿಂದ ವೇತನ ನೀಡಲಾಗುತ್ತಿದೆ. ಆದರೆ ಅವರು ಸರಿಯಾದ ಸಮಯಕ್ಕೆ ವೇತನ ನೀಡುವುದಿಲ್ಲ, ನಮಗೆ ನೀಡುವ ವೇತನದಲ್ಲಿ ಅರ್ಧ ಹಣ ಏಜೆನ್ಸಿಗಳ ಪಾಲಾಗುತ್ತಿದೆ ಎಂಬುದಾಗಿ ಅವರು ಆಪಾದಿಸಿದರಲ್ಲದೆ, ನಾವು ಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಾ ಅರ್ಧ ಆಯುಷ್ಯವನ್ನು ಕಳೆದಿದ್ದೇವೆ. ಇನ್ನು ಮುಂದೆ ಆದರೂ ನಮ್ಮನ್ನು ಖಾಯಂಗೊಳಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದರು.
ನಮಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಯಾವುದೇ ಉದ್ಯೋಗ ಭದ್ರತೆ ನೀಡಲಾಗಿಲ್ಲ, ಇದರಿಂದಾಗಿ ನಮ್ಮ ಕುಟುಂಬ ನಿರ್ವಹಣೆ ತುಂಬಾ ಕಷ್ಟವಾಗಿದೆ. ಕೊರೊನಾ ಸಂಕಷ್ಟ ಪರಿಸ್ಥಿತಿಯಲ್ಲಿ ಸಹ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು, ಹಗಲಿರುಳು ನಗರಸಭೆ ಕೆಲಸ ನಿರ್ವಹಿಸಿದ್ದೇವೆ. ಆದ್ದರಿಂದ ಸರ್ಕಾರ ಈ ಕೂಡಲೇ ನಮ್ಮ ಕೆಲಸಗಳನ್ನು ಖಾಯಂಗೊಳಿಸಿ, ನೇರವೇತನ ಜಾರಿಗೊಳಿಸುವ ಮೂಲಕ ನಮಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿದರು.
ನಗರಸಭೆ ಸದಸ್ಯ ಡಿ.ಸಣ್ಣಪ್ಪ, ದಲಿತ ಮುಖಂಡ ಘಾಟ್ ರವಿ, ಅಂಬೇಡ್ಕರ್ ಸೇನೆ ಮುಖಂಡ ಕೆ.ಪಿ.ಶ್ರೀನಿವಾಸ್ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡು ಪೌರಕಾರ್ಮಿಕರಿಗೆ ಬೆಂಬಲ ವ್ಯಕ್ತಪಡಿಸಿದರು.
ಈ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಹೊರಗುತ್ತಿಗೆ ವಾಹನ ಚಾಲಕ ಸಂಘದ ಅಧ್ಯಕ್ಷರಾದ ಬಿ.ದಿವಾಕರ, ಉಪಾಧ್ಯಕ್ಷರಾದ ಆರ್.ಎಲ್.ರಾಜಶೇಖರ್, ಪಿ.ವೀರೇಂದ್ರ, ವೈ.ಆರ್.ರಂಗನಾಥ್, ಅಭಿಷೇಕ್, ಕಾರ್ತಿಕ್ , ಡಿ.ಮಂಜುನಾಥ್, ಹನುಮಂತ, ಫಯಾಜ್, ಶ್ರೀನಿವಾಸ್, ಸಿದ್ದೇಶ್, ಷಫೀವುಲ್ಲಾ, ಚಂದ್ರಶೇಖರ್ ಹಾಗೂ ಡಾಟಾ ಎಂಟ್ರಿ ಆಪರೇಟರ್ ಗಳಾದ ಕಿರಣ್ ಕುಮಾರ್, ನೇತ್ರಾವತಿ, ಸ್ವಾಮಿ, ಆನಂದ್, ಫರ್ವಿತೇಜ್ , ಪೌರ ಕಾರ್ಮಿಕ ಸಂಘದ ಅಧ್ಯಕ್ಷರಾದ ಬಿ.ದುರ್ಗೇಶ್, ನಗರಸಭೆ ಸದಸ್ಯರಾದ ಡಿ.ಸಣ್ಣಪ್ಪ ಇತರರು ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್ ಚಿತ್ರದುರ್ಗ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz