ಗುಬ್ಬಿ: ಹೇಮಾವತಿ ಲಿಂಕ್ ಕೆನಾಲ್ ಮೂಲಕ ಹೇಮಾವತಿ ನೀರು ಹರಿಸುವ ಎಕ್ ಪ್ರೆಸ್ ಪೈಪ್ ಲೈನ್ ಕಾಮಗಾರಿಗೆ ವಿರೋಧ ನನ್ನದೂ ಇದೆ ಎಂದು ಶಾಸಕ ಎಸ್.ಆರ್. ಶ್ರೀನಿವಾಸ್ ತಿಳಿಸಿದರು.
ಅವರು ಚೇಳೂರು ಹೋಬಳಿ ರಂಗನಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಒಂದೂವರೆ ಕೋಟಿ ರೂ.ಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯ ಪಾಲಿನ ಹೇಮಾವತಿ ನೀರು ಬೇರೆಡೆಗೆ ಕೊಂಡೊಯ್ಯಲು ಸಾಧ್ಯವಿಲ್ಲ. ಈಗಾಗಲೇ ಮುಖ್ಯನಾಲೆ ಅಗಲೀಕರಣ ಮಾಡಲಾಗಿದ್ದು, ಇದರ ಮೂಲಕವೇ ನೀರು ಹರಿಸಿಕೊಳ್ಳಲಿ ಎಂಬ ಆಗ್ರಹ ನಾನು ಸಹ ಮಾಡುತ್ತಿದ್ದೇನೆ ಎಂದರು.
ಹೊಸ ಆಸ್ಪತ್ರೆಗಳ ನಿರ್ಮಾಣ ಗ್ರಾಮೀಣ ಭಾಗದಲ್ಲಿ ನಡೆದಿದೆ. 68 ಲಕ್ಷ ರೂ.ಗಳಲ್ಲಿ ಹೂವಿನಕಟ್ಟೆ ಹಾಗೂ ಅಂಕಸಂದ್ರ ಗ್ರಾಮದಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ನೀಗಿಸಲು ಸಿದ್ಧತೆ ಮಾಡಲಾಗಿದೆ. ಹೊರ ಗುತ್ತಿಗೆಯಲ್ಲಿ ಡಾಕ್ಟರ್ ಸೇರಿದಂತೆ ಎಲ್ಲಾ ತಂತ್ರಜ್ಞರನ್ನು ನೇಮಿಸಲಾಗಿದೆ. ಅವಶ್ಯ ಡಾಕ್ಟರ್‌ಗಳ ನೇಮಕ ಕೂಡಲೇ ಆಗಲಿದೆ ಎಂದ ಅವರು, ಉಪ ಚುನಾವಣೆ ಫಲಿತಾಂಶದಲ್ಲಿ ದಾವಣಗೆರೆಯಲ್ಲಿ ನಾನು ಕೂಡ ಪ್ರಚಾರ ನಡೆಸಿದ್ದೆ. ಅಲ್ಲಿನ ವಾತಾವರಣ ಕಾಂಗ್ರೆಸ್‌ಗೆ ಗೆಲುವು ತೋರುತ್ತಿದೆ ಎಂದರು.
“ಎಲ್ಲಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಮುಂದಾಗಿದೆ. ಶಿಕ್ಷಣ ಇಲಾಖೆಯಲ್ಲಿ 66 ಸಾವಿರ ಹುದ್ದೆಗಳು ಭರ್ತಿಯಾಗಬೇಕಿದೆ. ಹೊಸದಾಗಿ ಕೆಪಿಎಸ್ ಶಾಲೆಗಳು ತಾಲ್ಲೂಕಿನಲ್ಲಿ ಎಳೆಂಟು ಕಡೆ ಆರಂಭವಾಗಿವೆ. ಅರ್ಹ ಶಿಕ್ಷಕರ ಶಾಲೆಗಳ ಬಗ್ಗೆ ಪೋಷಕರಲ್ಲಿ ಆಸಕ್ತಿ ಕಾಣುತ್ತಿಲ್ಲ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬಂತೆ ಖಾಸಗಿಯತ್ತ ಮುಖ ಮಾಡುತ್ತಾರೆ. ಈ ಬಾರಿ ಹತ್ತನೇ ತರಗತಿ ಫಲಿತಾಂಶ ಶೇ.97ರಷ್ಟಿದೆ. ಮುಂದಿನ ವರ್ಷ ನೂರಕ್ಕೆ ನೂರು ಫಲಿತಾಂಶ ತರುವಂತೆ ಸೂಚನೆ ನೀಡಲಾಗಿದೆ.”
– ಎಸ್.ಆರ್. ಶ್ರೀನಿವಾಸ್, ಶಾಸಕರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಸಾಲೇನೆಹಳ್ಳಿ ರಾಜಣ್ಣ, ರೇಣುಕಮ್ಮ ಕಾಂತರಾಜು, ಗಂಗಣ್ಣ, ಮುಖಂಡರಾದ ಜಗದೀಶ್, ಜಯಣ್ಣ, ಮಲ್ಲೇಶ್, ಲಿಂಗಣ್ಣ, ಕುಮಾರ್, ರಮೇಶ್, ಪಿಡಿಒ ಯುವರಾಜು ಇತರರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


