ತುಮಕೂರು: ಜಗದ್ಗುರು ಶ್ರೀ ರೇಣುಕಾಚಾರ್ಯರು ನಡೆಸಿಕೊಂಡು ಬಂದ ವೀರಶೈವ ಪರಂಪರೆಯಲ್ಲಿ ವೀರಶೈವ ಧಮದ ಮೂಲ ಸಿದ್ದಾಂತವನ್ನು ಬಹಳಷ್ಟು ಜನ ತಿಳಿದುಕೊಂಡಿಲ್ಲ. ಅಲ್ಲದೆ ತಿಳಿದುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಹೀಗಾಗಿ ಧರ್ಮದಲ್ಲಿ ಅನೇಕ ಸಮಸ್ಯೆ ಮತ್ತು ಸವಾಲುಗಳನ್ನು ಕಾಣುವಂತಾಗಿದೆ ಎಂದು ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನ ರಂಭಾಪುರಿ ಪೀಠದ ಶ್ರೀ ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ತುಮಕೂರು ನಗರದಲ್ಲಿ ನಾಲ್ಕು ದಿನಗಳ ಕಾಲ ನಡೆದ ಧನುರ್ಮಾಸದ ಇಷ್ಟಲಿಂಗ ಮಹಾಪೂಜೆ ಹಾಗೂ ಜನಜಾಗೃತಿ ಧರ್ಮ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಇರುವಂತಹ ಸತ್ಯವನ್ನು ಗ್ರಂಥಗಳಿಂದ ತಿಳಿದುಕೊಳ್ಳಲು ಸಾಧ್ಯವಿದೆ. ಆದ್ರೆ ಬಹಳಷ್ಟು ಜನ ಅವುಗಳನ್ನು ತಿಳಿದುಕೊಂಡು ದಾರಿಯಲ್ಲಿ ನಡೆದುಕೊಂಡರೆ ಸನ್ಮಾರ್ಗ ಲಭಿಸಲಿದೆ, ಆದ್ರೆ ಕೆಲವರು ಅದನ್ನು ತಿಳಿದುಕೊಳ್ಳದೆ ಇರುವುದರಿಂದ ಕೆಲವೊಂದು ಅವಾಂತರಗಳು ಮತ್ತು ಆತಂಕಗಳಿಗೆ ಕಾರಣವಾಗಿದೆ ಎಂದ್ರೆ ತಪ್ಪಾಗಲಾರದು ಎಂದು ತಿಳಿಸಿದರು.
ವೀರಶೈವ ಧರ್ಮದ ಇತಿಹಾಸ ಮತ್ತು ಬೆಳೆದುಬಂದ ಪರಂಪರೆ ಅತ್ಯಂತ ಪ್ರಾಚೀನ ಎನ್ನುವುದರಲ್ಲಿ ಎರಡು ಮಾತು ಇಲ್ಲವೇ ಇಲ್ಲ. ಪರಮಾಚಾರ್ಯರು ಹಾಕಿದ ಧರ್ಮ ಸಿದ್ದಾಂತದ ತಳಹದಿಯ ಮೇಲೆ 12ನೇ ಶತಮಾನದ ಬಸವಾದಿ ಶರಣರು ಅದರಂತೆ ನಡೆದು ನುಡಿದು ಸಮಾಜದ ಶಕ್ತಿಯನ್ನು ಮತ್ತಷ್ಟು ಸಂವಧನೆಗೊಳಿಸಿರುವಂತಹುದನ್ನು ಜನ ತಿಳಿದುಕೊಳ್ಳಬೇಕು ಎಂದರು.
ಬಸವಾದಿ ಶಿವಶರಣರಿಗಿಂತ ಪೂರ್ವದಲ್ಲಿಯೇ ವೀರಶೈವ ಧರ್ಮ ಅಸ್ತಿತ್ವದಲ್ಲಿ ಇತ್ತು, ಜಗದ್ಗುರು ಪಂಚಾಚಾರ್ಯರ ಪರಂಪರೆ ಪವಿತ್ರವಾದ ಗುರು ಪರಂಪರೆ ಈ ವೀರಶೈವ ಧರ್ಮ ಪರಂಪರೆ ಮತ್ತು ತತ್ವ ಸಿದ್ದಾಂತಗಳನ್ನು ಪ್ರತಿಷ್ಟಾಪಿಸಿ ಜನರನ್ನು ಸನ್ಮಾಗದ ಕಡೆಗೆ ಕರೆತಂದರು ಎಂಬುದಕ್ಕೆ ಇತಿಹಾಸದಲ್ಲಿನ ಅನೇಕ ಸಂಗತಿಗಳು ಇವೆ ಎಂದರು.
ಸಿದ್ದಾಂತ ಶಿಕಾಮಣಿಯಲ್ಲಿ ಉಲ್ಲೇಖಿಸಿರುವಂತೆ ಭಗವಂತನು ಜಗದ್ಗುರು ರೇಣುಕಾಚಾರ್ಯರಿಗೆ ʼ ನನ್ನ ಪರವಾದ ಶಿವಾಧ್ವತ ಸಿದ್ದಾಂತವನ್ನು ಯಾವುದೋ ಒಂದು ವರ್ಗದ ಹಿತಕ್ಕಾಗಿ ಅಲ್ಲ, ಬದಲಾಗಿ ಎಲ್ಲಾ ವರ್ಗದ ಜನರಿಗೆ ಅನ್ವಯವಾಗುವಂತಹ ವೀರಶೈವ ಮತ ಸಿದ್ದಾಂತವನ್ನು ಬೋಧಿಸಿ ಸ್ಥಾಪಿಸುʼ ಎಂದು ಆದೇಶ ಮಾಡಿದ್ದನು ಎಂದು ಹೇಳಿದರು.
ಸಮಾಜ ಮತ್ತು ಸಂಘಟನೆ ಬಗ್ಗೆ ಶಂಕರಬಿದರಿಯವರು ಅಚ್ಚುಕಟ್ಟಾಗಿ ಹೇಳಿದರು. ಅವರು ಹೇಳಿದ ಬಹಳಷ್ಟು ವಿಚಾರಗಳು ತಿಳಿದಿರುವಂತಹುದು ಎಂದರು.
ಸಾನಿಧ್ಯ ವಹಿಸಿದ್ದ ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ತಾನು ಅಭಿವೃದ್ಧಿ ಹೊಂದಬೇಕು ಎಂದು ಅತಿಯಾದ ಆಸೆಯೊಂದಿಗೆ ಮನುಷ್ಯ ಕೆಲ ವಾಮ ಮಾರ್ಗವನ್ನು ಹಿಡಿಯುತ್ತಾನೆ. ಈ ವೇಳೆ ಆತನ ಮನಸ್ಸಿನಲ್ಲಿ ಕಲ್ಮಷ ಸೃಷ್ಟಿಯಾಗುತ್ತದೆ. ಇಂತಹ ಸಂದರ್ಭದಲ್ಲಿ ಧರ್ಮ ಮಾರ್ಗದಲ್ಲಿ ಸಾಗಿದರೆ ಅಂತಹ ಕಲ್ಮಷಗಳನ್ನು ತೊಳೆದುಹಾಕಬಹುದಾಗಿದೆ. ಆಗ ಮನಸ್ಸು ಶುದ್ದವಾಗಿರುತ್ತದೆ. ಹೀಗಾಗಿ ಇಂತಹ ಧನುರ್ಮಾಸ ಇಷ್ಟಲಿಂಗ ಮಹಾಪೂಜೆಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಪಾಲ್ಗೊಳ್ಳಬೇಕು ಎಂದರು.
ಅತಿಥಿಗಳಾಗಿ ಭಾವಹಿಸಿದ್ದ ವೀರಶೈವ ಮಹಾಸಭಾ ಅಧ್ಯಕ್ಷ ಶಂಕರ್ ಬಿದರಿ ಮಾತನಾಡಿ, ಮಠಗಳು ಕಾರ್ಯ ಕೇವಲ ಅಸ್ತಿ ಮಾಡುವ ಮೂಲಕವಲ್ಲ ಬದಲಾಗಿ ಧಾರ್ಮಿಕ ಮೌಲ್ಯವನ್ನು ಪ್ರಚಾರ ಮಾಡಬೇಕಿದೆ. ಅದನ್ನು ರಂಭಾಪುರಿ ಪೀಠದ ಸ್ವಾಮೀಜಿ ನಡೆಸಿಕೊಂಡು ಬರುತ್ತಿದ್ದಾರೆ. ವೀರಶೈವ ಮತ್ತು ಲಿಂಗಾಯತ ಒಂದೇ ಎಂಬುದು ಸಮುದಾಯದವರು ತಿಳಿಯಬೇಕಿದೆ. ಸಮಾಜಕ್ಕೆ ಬಲ ತುಂಬ ಬೇಕಾದ ಕೆಲಸ ಮಾಡಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಟಿ.ಆರ್.ಸದಾಶಿವಯ್ಯ, ಭಸ್ಮಾಂಗಿ ರುದ್ರಯ್ಯ, ಯುವ ಸಾಹಿತಿ ಪ್ರಶಾಂತ್ ರಿಪ್ಪನ್ ಪೇಟೆ ಸೇರಿದಂತೆ ವಿವಿಧ ಮಠಗಳ ಸ್ವಾಮೀಜಿಗಳು ಹಾಜರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx