ತುಮಕೂರು: ರೈತರು ಸಾವಯವ ಹಾಗೂ ಸಮಗ್ರ ಕೃಷಿ ಪದ್ಧತಿಯನ್ನು ಅನುಸರಿಸಿದರೆ ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ಮೂಲಕ ಸುಸ್ಥಿರ ಜೀವನವನ್ನು ನಡೆಸಬಹುದು ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಎನ್. ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಷ್ಟ್ರೀಯ ರೈತರ ದಿನಾಚರಣೆಯ ಅಂಗವಾಗಿ ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದೊಂದಿಗೆ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ “ಸಮಗ್ರ ಕೃಷಿ ಪದ್ಧತಿ” ಕುರಿತು ರೈತರು ಮತ್ತು ವಿಜ್ಞಾನಿಗಳ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ದಿವಂಗತ ಚೌಧರಿ ಚರಣ್ ಸಿಂಗ್ ಜನ್ಮದಿನದ ಸ್ಮರಣಾರ್ಥವಾಗಿ ಪ್ರತೀ ವರ್ಷ ಡಿಸೆಂಬರ್ 23ರಂದು ಭಾರತದಾದ್ಯಂತ ರಾಷ್ಟ್ರೀಯ ರೈತರ ದಿನಾಚರಣೆಯನ್ನು ಆಚರಿಸಲಾಗುವುದು. ಚೌಧರಿ ಚರಣ್ ಸಿಂಗ್ ಅವರಿಗಿದ್ದ ರೈತಪರ ಕಾಳಜಿ ಹಾಗೂ ರೈತರ ಶ್ರೇಯೋಭಿವೃದ್ಧಿಗೆ ಅವರು ನೀಡಿದ ಕೊಡುಗೆಗಳ ಬಗ್ಗೆ ತಿಳಿಸಿದ ಅವರು ಮಣ್ಣು ಹಾಗೂ ನೀರಿನ ಸಂರಕ್ಷಣೆ ಮಾಡುವುದು ಎಲ್ಲಾ ರೈತರ ಮೊದಲ ಆದ್ಯತೆಯಾಗಿರಬೇಕು ಎಂಬ ಸಂದೇಶವನ್ನು ನೀಡಿದರು.
ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಆಯ್ಕೆಯಾದ ಪ್ರಗತಿಪರ ರೈತರಿಗೆ ಜಿಲ್ಲಾ ಮಟ್ಟದ ಆತ್ಮ ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಎನ್. ಲೋಗಾನಂದನ್, ತುಮಕೂರು ವಿಭಾಗ ಉಪ ಕೃಷಿ ನಿರ್ದೇಶಕ ಹುಲಿರಾಜು, ಸಹಾಯಕ ಕೃಷಿ ನಿರ್ದೇಶಕ ಹನುಮಂತರಾಜು, ಉಪ ಯೋಜನಾ ನಿರ್ದೇಶಕ(ಆತ್ಮ) ಕೆ. ವಿನಯ್, ರಾಜ್ಯ ಕೃಷಿಕ ಸಮಾಜ ಮಾಜಿ ಅಧ್ಯಕ್ಷ ಪಾಪಣ್ಣ ಸ್ವಾಮಿ, ರೈತ ಸಂಘದ ಅಧ್ಯಕ್ಷ ಚಿಕ್ಕ ಬೋರೇಗೌಡ, ಆತ್ಮ ಯೋಜನೆಯ ಸಿಬ್ಬಂದಿ ಹಾಗೂ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ರೈತ ಹಾಗೂ ರೈತ ಮಹಿಳೆಯರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx