ಸಿರಾ: ತಾಲೂಕು ಜೆಡಿಎಸ್ ಪಕ್ಷದ ವತಿಯಿಂದ ಮೇ 26 ರಂದು ಮತಪಟ್ಟಿ ಪರಿಷ್ಕರಣೆ, ವಿವಿಧ ಘಟಕಗಳ ಪದಾಧಿಕಾರಿಗಳ ನೇಮಕಾತಿ ಕಾರ್ಯಕ್ರಮ, ಪಕ್ಷದ ಬಿಎಲ್ ಒ ಕಾರ್ಯಕರ್ತರ ತರಬೇತಿ ಹಾಗೂ ಪಕ್ಷದ ವಿವಿಧ ಮುಖಂಡರಿಗೆ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಬಿ. ಸತ್ಯಪ್ರಕಾಶ್ ತಿಳಿಸಿದರು.
ನಗರದ ಜೆಡಿಎಸ್ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಶ್ರೀ ರಾಮ ಕಲ್ಯಾಣ ಮಂಟಪದಲ್ಲಿ ಅಂದು ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು ಸದರಿ ಕಾರ್ಯಕ್ರಮದಲ್ಲಿ ಮಾಜಿ ವಿಪ ಸದಸ್ಯರಾದ ತಿಪ್ಪೇಸ್ವಾಮಿ, ನೂತನ ಜಿಲ್ಲಾ ಜೆಡಿ ಎಸ್ ಅಧ್ಯಕ್ಷ ಹೆಚ್ ನಿಂಗಪ್ಪ, ಮಾಜಿ ಅಧ್ಯಕ್ಷ ಅಂಜನಪ್ಪ, ಚೀನಾ ಹಳ್ಳಿ ಶಾಸಕ ಸಿಬಿ ಸುರೇಶ್‌ಬಾಬು ಅವರನ್ನು ಪಕ್ಷದ ವತಿಯಿಂದ ಅಭಿನಂದಿಸುವ ಕಾರ್ಯಕ್ರಮವನ್ನೂ ಏರ್ಪಡಿಸಲಾಗಿದೆ ಎಂದರು.
ಜೆಡಿಎಸ್ ಪಕ್ಷದ ಮತ್ತಷ್ಟು ಸಂಘಟನೆಯ ದೃಷ್ಟಿಯಿಂದ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು ಇದೇ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರವನ್ನು ವಿತರಿಸಲಾಗುವುದು. ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು, ವಿವಿಧ ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಸತ್ಯಪ್ರಕಾಶ್ ಮನವಿ ಮಾಡಿದರು.
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಆರ್ ಉಗ್ರೇಶ್ ಮಾತನಾಡಿ ಜೆಡಿಎಸ್ ಪಕ್ಷದ ಸಂಘಟನೆಯ ಹಿನ್ನೆಲೆಯಲ್ಲಿ ಪಕ್ಷಕ್ಕಾಗಿ ದುಡಿದ ಹಾಗೂ ಈಗಲೂ ದುಡಿಯುತ್ತಿರುವ ನಾಲ್ಕು ಮಂದಿ ಹಿರಿಯ ಮುಖಂಡರನ್ನು ಅಭಿನಂದಿಸಲಾಗುವುದು ಎಂದರು.
ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಎಸ್ಆರ್ ಗೌಡ ಮಾತನಾಡಿ ತಾಲೂಕಿನಲ್ಲಿ ಜೆಡಿಎಸ್ ಪಕ್ಷ ಒಂದು ಪ್ರಬಲ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸುತ್ತಿದ್ದು ಪಕ್ಷದ ಕಾರ್ಯಕರ್ತರು, ಮುಖಂಡರು ಮೇ 26 ರಂದು ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಜೆಡಿಎಸ್ ಪಕ್ಷದ ರಾಜ್ಯ ಕಾರ್ಯದರ್ಶಿ ರೆಹಮತ್ ವುಲ್ಲಾ, ಜಿಪಂ ಮಾಜಿ ಉಪಾಧ್ಯಕ್ಷ ಮುದಿಮಡು ರಂಗಸ್ವಾಮಯ್ಯ, ನಗರ ಘಟಕದ ಅಧ್ಯಕ್ಷ ಶ್ರೀರಂಗ, ನಗರಸಭಾ ಸದಸ್ಯ ಆರ್ ರಾಮು, ಮುಖಂಡರಾದ ಬರಗೂರು ಬೊಪ್ಪಣ್ಣ, ಮಹಿಳಾ ಘಟಕದ ಅಧ್ಯಕ್ಷೆ ರೇಣುಕಮ್ಮ, ನರಸಿಂಹಮೂರ್ತಿ, ಜಯಮ್ಮ, ಶಿವಣ್ಣ, ನರಸಿಂಹಯ್ಯ, ಕೋಟೆ ಮಹದೇವ್ ಸೇರಿದಂತೆ ಅನೇಕ ಮುಖಂಡರು ಇದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


