ರಾತ್ರಿ ವೇಳೆ ಜಿಂಕೆಗಳನ್ನು ಬೇಟೆಯಾಡಿ ಮಾಂಸವನ್ನು ಹಂಚಿಕೊಳ್ಳುವ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ಐವರು ಆಸಾಮಿಗಳನ್ನು ಬಂಧಿಸಿರುವ ಘಟನೆ ಹನೂರು ಸಮೀಪ ಉದ್ದನೂರು ಗ್ರಾಮದ ತೋಟದ ಮನೆಯಲ್ಲಿ ನಡೆದಿದೆ.
ತಾಲ್ಲೂಕಿನ ರಾಮಾಪುರ ಗ್ರಾಮದ ಲಕ್ಷ್ಮಣ (55), ಕಾಂಚಳ್ಳಿ ಗ್ರಾಮದ ಮುತ್ತಪ್ಪ (40), ಮುತ್ತುರಾಜ (35), ಅಜ್ಜೀಪುರದ ಗೋವಿಂದರಾಜು (27), ನಾಗಣ್ಣ ನಗರದ ಪೆರಿಯಣ್ಣ (23) ಬಂಧಿರಾಗಿದ್ದು, ಪರಾರಿಯಾಗಿರುವ ಮತ್ತೊಬ್ಬ ಕಾಂಚಳ್ಳಿ ಗ್ರಾಮದ ಸತೀಶ್‍ಗಾಗಿ ಬಲೆ ಬೀಸಲಾಗಿದೆ.
ಮಲೆ ಮಹದೇಶ್ವರ ವನ್ಯಜೀವಿ ವಲಯದ ಹನೂರು ಗಸ್ತಿನ ಹುಬ್ಬೇ ಹುಣಸೆ ಡ್ಯಾಮ್ ಬಳಿಯ ಬೆಳ್ಳತ್ತೂರು ಗುಡ್ಡದ ಕಾಡಿನಲ್ಲಿ ನಾಡ ಬಂದೂಕಿನ ಸಹಾಯದಿಂದ ಮೂರು ಜಿಂಕೆಗಳನ್ನು ಬೇಟೆಯಾಡಿ ಮಾಂಸವನ್ನು ತುಂಡರಿಸಿ ಪಾಲು ಹಂಚಿಕೊಳ್ಳವ ವೇಳೆ ದೊರೆತ ಖಚಿತ ಮಾಹಿತಿ ಮೇರೆಗೆ ಡಿಎಫ್‍ಒ ಏಡುಕೊಂಡಲು ಮಾರ್ಗದರ್ಶನದಲ್ಲಿ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ವೇಳೆ ಮತ್ತೊಬ್ಬ ಆರೋಪಿ ಕಾಂಚಳಿ ಸತೀಶ್ ಕಣ್ತಪ್ಪಿಸಿಕೊಂಡಿದ್ದು ಆತನ ಬಂಧನಕ್ಕೆ ಬಲೆ ಬೀಸಲಾಗಿದೆ.
ಬಂಧಿತರಿಂದ ಜಿಂಕೆ ಮಾಂಸ ಚರ್ಮ, 2 ಬೈಕ್, 2 ನಾಡ ಬಂದೂಕುಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದಾಳಿಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಆರ್.ಸಾಲನ್ ಪ್ರಸಾದ್, ಅರಣ್ಯ ರಕ್ಷಕರಾದ ಅನಿಲ್ ಕುಮಾರ್, ನಂದೀಶ್, ಪರಶುರಾಮ ಭಜಂತ್ರಿ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ವರದಿ: ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5