ಸರಗೂರು: ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ನಿಗಾ ವಹಿಸುವ ಜೊತೆಗೆ ಅಪರಾಧ ಕೃತ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಬಗ್ಗೆ ತೀರ್ಮಾನಿಸಲಾಯಿತು.
ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಅಪರಾಧ ತಡೆ ಮುನ್ನೆಚ್ಚರಿಕೆ ಕ್ರಮವಾಗಿ ಸರಗೂರು ಪೊಲೀಸರು ವರ್ತಕರು, ಆಭರಣ ಅಂಗಡಿ ಮಾಲೀಕರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವ ಬಗ್ಗೆ ಒಮ್ಮತದ ಅಭಿಪ್ರಾಯದೊಂದಿಗೆ ಕ್ರಮವಹಿಸಲಾಯಿತು.
ಈ ವೇಳೆ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವೃತ್ತ ನಿರೀಕ್ಷಕ ಎನ್.ಆನಂದ್, ಅಪರಾಧ ಕೃತ್ಯಗಳನ್ನು ತಡೆಗಟ್ಟುವಲ್ಲಿ ಇಲಾಖೆ ಶ್ರಮವಹಿಸಿದೆ. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಯಾರೇ ಭಾಗಿಯಾಗಿದ್ದರು ಅಂತಹವರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ. ಆದ್ದರಿಂದ ಅಪರಾಧ ಕೃತ್ಯಗಳನ್ನು ಶೀಘ್ರದಲ್ಲೇ ಪತ್ತೆ ಹಚ್ಚಲು ಸಹಕಾರಿಯಾಗುವಂತೆ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದರೆ ಹೆಚ್ಚಿನ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ವರ್ತಕರು, ಆಭರಣ ಅಂಗಡಿ ಮಾಲೀಕರು ಸಹಕಾರ ನೀಡಬೇಕು ಎಂದರು.
ಸಮಾಜದಲ್ಲಿ ಶಾಂತಿಯುತ ವಾತಾವರಣ ನಿರ್ಮಾಣವಾಗಬೇಕಂದರೆ ಅಲ್ಲಿ ಕಾನೂನು ಸುವ್ಯವಸ್ಥೆ ಬಿಗಿಯಾಗಿರಬೇಕು. ಹೀಗಾಗಿ ಅಪರಾಧ ಕೃತ್ಯಗಳನ್ನು ಎಸಗಿದ ಅಪರಾಧಿಗಳನ್ನು ಕೂಡಲೇ ಪತ್ತೆ ಹಚ್ಚಲು ಸಿಸಿ ಕ್ಯಾಮೆರಾಗಳು ಸಹಕಾರಿ ಎಂದು ತಿಳಿಸಿದರು.
ಸಾರ್ವಜನಿಕ ರಕ್ಷಣೆ ಕಾಯಿದೆ ಪ್ರಕಾರ 100ಕ್ಕಿಂತ ಹೆಚ್ಚು ಜನ ಸೇರುವ ಸ್ಥಳಗಳಾದ ಮಸೀದಿ, ಚರ್ಚ್, ದೇವಸ್ಥಾನಗಳು ಹಾಗೂ ಅಂಗಡಿ, ಹೋಟೆಲ್‍ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು. ಇದರಿಂದ ಕಳ್ಳತನ, ದರೋಡೆಯಂಥ ಪ್ರಕರಣಗಳನ್ನು ಪತ್ತೆ ಹಚ್ಚಲು ನೆರವಾಗಲಿದೆ ಎಂದರು.
ಆರಕ್ಷಕ ಉಪ ನಿರೀಕ್ಷಕ ಶ್ರವಣದಾಸ್ ರೆಡ್ಡಿ, ಸಿಬ್ಬಂದಿಗಳಾದ ಇಮ್ರಾನ್ ಅಹಮ್ಮದ್, ಆನಂದ್, ನಾಗನಾಯಕ, ಸೋಮನಾಯಕ, ಶ್ರೀಕಂಠಸ್ವಾಮಿ, ರಮೇಶ್, ರಾಜು, ನಂದೀಶ್ ಸೇರಿದಂತೆ ವರ್ತಕರು, ಆಭರಣ ಅಂಗಡಿ ಮಾಲೀಕರು ಮುಂತಾದವರು ಹಾಜರಿದ್ದರು.
ವರದಿ: ಚಂದ್ರ ಹಾದನೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5