ಪಾವಗಡ: ಸಮರ್ಪಕ ವಿದ್ಯುತ್ ಪೂರೈಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಸೋಮವಾರ ಬೆಸ್ಕಾಂ ಎಇಇ ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ತಾಲ್ಲೂಕು ಅಧ್ಯಕ್ಷ ಪೂಜಾರಪ್ಪ ಮಾತನಾಡಿ, ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ರೈತರ ಕೃಷಿ ಕಾರ್ಯಕ್ಕೆ ಹಿನ್ನಡೆಯಾಗುತ್ತಿದೆ. ಸಮರ್ಪಕವಾಗಿ ವಿದ್ಯುತ್ ಪೂರೈಸದಿರುವುದರಿಂದ ರೈತರ ಬೆಳೆಗಳು ಒಣಗುತ್ತಿವೆ.
ಶೈಲಾಪುರ ಸಬ್ ಸ್ಟೇಷನ್ ನಲ್ಲಿ ಸರ್ಕಾರ ನಿಗದಿ ಮಾಡಿರುವ ವೇಳಾಪಟ್ಟಿಯಂತೆ 3 ಪೇಸ್ 8 ಗಂಟೆ, ಸಿಂಗಲ್ ಪೇಸ್ 6 ಗಂಟೆ ವಿದ್ಯುತ್ ನೀಡದೇ ತಮಗೆ ಇಷ್ಟ ಬಂದ ಹಾಗೆ ವಿದ್ಯುತ್ ಸರಬರಾಜು ಮಾಡುತ್ತಿರುವ ಬೆಸ್ಕಾಂ ಇಲಾಖೆ ರೈತರ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.
ಮುಖಂಡ ಎತ್ತಿನಹಳ್ಳಿ ಚಿನ್ನ ಮಾತನಾಡಿ, ರೈತರ ಪಂಪ್ಸೆಟ್ಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು. ರೈತರು ಹೊಲಗದ್ದೆಗಳಲ್ಲಿ ಶೇಂಗಾ, ಟೊಮೇಟೊ, ಮೆಣಸು, ಬದನೆ, ಅಡಿಕೆ ಹಾಗೂ ಇತರೆ ಬೆಳೆಗಳಿಗೆ ಪಂಪ್ಸೆಟ್ ಮೋಟಾರ್ಗಳ ಮೂಲಕ ನೀರುಣಿಸುವರು. ಇಂತಹ ಸಂದರ್ಭದಲ್ಲಿ ಬೆಸ್ಕಾಂ ಸರಿಯಾದ ರೀತಿಯಲ್ಲಿ ವಿದ್ಯುತ್ ಪೂರೈಕೆ ಮಾಡದಿರುವುದರಿಂದ ನಾಟಿ ಮಾಡಿರುವ ಬೆಳೆ ಸಂಪೂರ್ಣ ಒಣಗಿ ನಷ್ಟವಾಗುತ್ತಿದೆ. ಸಂಕಷ್ಟದಲ್ಲಿರುವ ರೈತರ ಹಿತ ಕಾಪಾಡಲು ಸಮರ್ಪಕ ವಿದ್ಯುತ್ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ಕಾರ್ಯಕರ್ತ ಮನವಿ ಸ್ವೀಕರಿಸಿದ ಬೆಸ್ಕಾಂ ಎಇಇ ಕೃಷ್ಣಮೂರ್ತಿ ಮನವಿ ಸ್ವೀಕರಿಸಿ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ದಂಡಾಪಾಳ್ಯ ರಾಮಾಂಜಿ, ವೈ.ಟಿ.ರಾಜೇಶ್ ರೆಡ್ಡಿ, ಎಸ್.ನರಸಿಂಹರೆಡ್ಡಿ, ಬೂದಿಬೆಟ್ಟ ಕಿರಣ್, ಕೆ.ನರಸಿಂಹರೆಡ್ಡಿ, ನಾಗರಾಜು, ಲೋಕೇಶ್, ಪ್ರಕಾಶ್, ರಘು, ಶಿವರಾಜ್, ಪ್ರಭಾಕರ್, ಶಶಿ ಮತ್ತಿತರು ಇದ್ದರು.
ವರದಿ: ನಂದೀಶ್ ನಾಯ್ಕ ಪಾವಗಡ