ಗುಬ್ಬಿ: ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಕೇವಲ ಒಂದು ಜಾತಿಗೆ ಅಥವಾ ಸಮುದಾಯಕ್ಕೆ ಸೀಮಿತಗೊಳಿಸುವುದು ಅವರು ಈ ದೇಶಕ್ಕೆ ನೀಡಿದ ಅಪ್ರತಿಮ ಕೊಡುಗೆಗೆ ಮಾಡುವ ಅಪಚಾರವಾಗುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಸ್ವಾಯತ್ತ) ಹಾಗೂ ಸಂವಿಧಾನ ಸಂರಕ್ಷಣಾ ಪಡೆ, ಗುಬ್ಬಿ ತಾಲ್ಲೂಕು ಘಟಕದ ವತಿಯಿಂದ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಚಾಲುಕ್ಯ ಆಸ್ಪತ್ರೆ ಸಿಇಒ ಡಾ.ಬಿ.ಎನ್.ನಾಗಭೂಷಣ್ ತಿಳಿಸಿದರು.
ಪ್ರಾಂಶುಪಾಲ ಡಾ. ಪ್ರಸನ್ನ ಮಾತನಾಡಿ, ಶಿಕ್ಷಣವು ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕು ಮತ್ತು ಅದು ವಿಮೋಚನೆಯ ದಾರಿಯಾಗಿದೆ. ಶಿಕ್ಷಣ ಪಡೆದುಕೊಳ್ಳುವ ಮೂಲಕ ಸಮಾನತೆಯನ್ನು ಕಾಣಬಹುದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಉತ್ತಮ ಶಿಕ್ಷಣ ಪಡೆದುಕೊಂಡು ಸಮಾಜದಲ್ಲಿ ಸಮಾನತೆಯನ್ನು ರೂಪಿಸಬೇಕು ಎಂದರು.
ನವಭಾರತ ನಿರ್ಮಾತೃ ಬಿ.ಆರ್.ಅಂಬೇಡ್ಕರ್ ಎಂಬ ವಿಷಯದ ಬಗ್ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತ ಡಾ.ಎಚ್. ಲಕ್ಷ್ಮೀನಾರಾಯಣಸ್ವಾಮಿ ಮಾತನಾಡಿ, ‘ಹಿಂದೂ ಕೋಡ್ ಬಿಲ್’ ಮೂಲಕ ಮಹಿಳೆಯರಿಗೆ ಆಸ್ತಿ ಹಕ್ಕು, ವಿಚ್ಛೇದನದ ಹಕ್ಕು ಮತ್ತು ಸಮಾನತೆಯ ಹಕ್ಕುಗಳನ್ನು ದೊರಕಿಸಿಕೊಡಲು ಅಂಬೇಡ್ಕರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಎಂದು ತಿಳಿಸಿದರು.
ನಿವೃತ್ತ ಪ್ರಾಂಶುಪಾಲರಾದ ಎನ್.ಇಂದಿರಮ್ಮ ಸಂವಿಧಾನ, ಸಾಮಾಜಿಕ ನ್ಯಾಯಕ್ಕಾಗಿ ಎಂಬ ವಿಷಯದ ಬಗ್ಗೆ ಮಾತನಾಡಿ, ಅಂಬೇಡ್ಕರ್ ಪ್ರತಿಪಾದಿಸಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಎಂಬ ಮೌಲ್ಯಗಳು ವಿಶ್ವದ ಯಾವುದೇ ಮೂಲೆಯ ಮನುಷ್ಯನಿಗೂ ಅನ್ವಯಿಸುವಂತಹ ಸಾರ್ವತ್ರಿಕ ಮೌಲ್ಯಗಳಾಗಿವೆ. ಮಹಿಳೆಯರು ಶಿಕ್ಷಣ ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಅವರು ಸದಾ ಪ್ರೋತ್ಸಾಹಿಸುತ್ತಿದ್ದರು ಎಂದು ತಿಳಿಸಿದರು.
ಹೋರಾಟಗಾರ ರಾಮಕೃಷ್ಣಪ್ಪ, ಛಲವಾದಿ ಮಹಾಸಭಾ ಅಧ್ಯಕ್ಷ ಟಿ.ಇ.ಈರಣ್ಣ, ಕಾಲೇಜು ಶೈಕ್ಷಣಿಕ ಡೀನ್ ಡಾ.ಜಿ.ನಾಗರಾಜು, ಲೆಫ್ಟಿನೆಂಟ್ ಡಾ.ಸುಮುಖಿ, ವಾಣಿಜ್ಯ ಶಾಸ್ತ್ರದ ಉಪನ್ಯಾಸಕ ಹಾಗೂ ಸಾಂಸ್ಕೃತಿಕ ಸಂಚಾಲಕ ಜಿ.ಗಂಗಾಧರಯ್ಯ, ಅರುಣ್ ಕುಮಾರಿ ಮಾತನಾಡಿದರು.
ಉಪನ್ಯಾಸಕರಾದ ತಿಮ್ಮಣ್ಣ, ಕಾಲಪ್ಪ, ವನಜ, ತಿಮ್ಮೇಗೌಡ, ಅರ್ಪಿತ, ತಿಮ್ಮನಾಯಕ್, ಡಾ. ದರ್ಶನ, ಅಶೋಕ್, ಮಲ್ಲಿಕಾರ್ಜುನ ಪ್ರಭು, ಸಂವಿಧಾನ ರಕ್ಷಣಾ ಪಡೆಯ ಸಂಚಾಲಕರಾದ ಮರಿಯಾಂಬಿ, ಬಿ.ಟಿ. ಗಿರೀಶ್ ಕುಮಾರ್, ಮಂಜುನಾಥ ಪ್ರಭು, ಡಿ.ಲೋಕೇಶ್ ಹಾಗೂ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


