ಸಿರಾ: ಹದಿಹರೆಯದ ಹೆಣ್ಣುಮಕ್ಕಳು ಮತ್ತು ಮಹಿಳೆಯರು ಋತುಚಕ್ರದ ಸಂದರ್ಭದಲ್ಲಿ ವೈಜ್ಞಾನಿಕ ರೀತಿಯಲ್ಲಿ ನೈರ್ಮಲ್ಯ ಮತ್ತು ಆರೋಗ್ಯವನ್ನು ಕಾಪಾಡುವ ಮೂಲಕ ಸೋಂಕುಗಳಿಂದ ಮುಕ್ತರಾಗಿ ಗರ್ಭಾಶಯದ ಕ್ಯಾನ್ಸರ್ ತಡೆಗಟ್ಟಿ ಎಂದು ತಾಯಿ ಮತ್ತು ಮಕ್ಕಳ ಆರೋಗ್ಯ, ರಾಷ್ಟ್ರೀಯ ಕಿಶೋರ್ ಸ್ವಾಸ್ಥ್ಯ ಕಾರ್ಯಕ್ರಮ ಆಪ್ತಸಮಾಲೋಚಕರಾದ ಕಾವೇರಿ ಎನ್. ಕರೆ ನೀಡಿದರು.
ಅವರು ಕೂಸುಕುಂಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜನನಿ ಸಮಗ್ರ ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಹದಿಹರೆಯದ ಹೆಣ್ಣುಮಕ್ಕಳು ಮತ್ತು ಮಹಿಳೆಯರಿಗಾಗಿ ಆಯೋಜಿಸಿದ್ದ ಋತುಸ್ರಾವದ ನೈರ್ಮಲ್ಯ, ಆರೋಗ್ಯ ಮತ್ತು ಪೋಕ್ಸೋ ತರಬೇತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.
ಕಿಶೋರಿಯರು ಮತ್ತು ಹೆಣ್ಣುಮಕ್ಕಳು ಋತುಚಕ್ರದ ಸವಾಲುಗಳನ್ನು ಎದುರಿಸಲು ಮಾನಸಿಕ ಮತ್ತು ದೈಹಿಕವಾಗಿ ಸನ್ನದ್ಧರಾಗಬೇಕು. ಋತುಸ್ರಾವದೊಂದಿಗೆ ಬೆರೆತಿರುವ ಮೂಢನಂಬಿಕೆಗಳನ್ನು ಎದುರಿಸಲು ಕುಟುಂಬ ಮತ್ತು ಸಾಮಾಜಿಕ ಬೆಂಬಲದ ಅಗತ್ಯವೂ ಅವರಿಗಿದೆ ಎಂದರು. ವೈಯಕ್ತಿಕ ಸ್ವಚ್ಛತೆ, ರಕ್ತದ ಹೀರುವಿಕೆಗಾಗಿ ಬಳಸುವ ವಿವಿಧ ಸಲಕರಣೆಗಳ ಪರಿಚಯ, ಅವುಗಳ ಬಳಕೆಯಲ್ಲಿ ಸ್ವಚ್ಛತೆಯ ಪಾಲನೆ ಮತ್ತು ಪರಿಸರಕ್ಕೆ ಧಕ್ಕೆಯಾಗದಂತೆ ಅವುಗಳ ನಿರ್ವಹಣೆಯ ಮಾಹಿತಿ ನೀಡಿದರು. ಆರೋಗ್ಯ ಕಾಪಾಡುವಿಕೆ, ಅದರಲ್ಲೂ ವಿಶೇಷವಾಗಿ ಅನಿಮಿಯಾ ತಡೆಗಟ್ಟುವಿಕೆಗಾಗಿ ಸೇವಿಸಬಹುದಾದ ಆಹಾರಗಳನ್ನು ಪರಿಚಯಿಸಿದರು.
ಇಂಟಿಗ್ರೇಟೆಡ್ ಕೌನ್ಸಿಲಿಂಗ್ ಮತ್ತು ಟೆಸ್ಟಿಂಗ್ ಸೆಂಟರ್‌ನ ಸಂಪನ್ಮೂಲ ವ್ಯಕ್ತಿ ಮಧು ಶೇಖರ್ ಋತುಚಕ್ರ ಸಂಬಂಧಿತ ಸಮಸ್ಯೆಗಳಿಂದ ಹೊರಬರುವಂತೆ ಕರೆ ನೀಡಿದರು.
ಪೋಕ್ಸೋ ಕಾಯಿದೆಯ ಪರಿಚಯವನ್ನು ಜನನಿ ಟ್ರಸ್ಟ್ ನ ಕೆವಿನ್ ಶ್ರೀಲತ ನೀಡಿದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕಿ ಎಂ.ಕೆ. ಗೌರಮ್ಮ, ಅಂಗನವಾಡಿ ಶಿಕ್ಷಕಿ ಮಂಜುಳಾ, ಹೊನ್ನಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಮಂಜಮ್ಮ, ಸಿದ್ದಗಂಗಮ್ಮ, ಪಾರ್ವತಮ್ಮ, ಜಯಲಕ್ಷ್ಮಿ, ಗ್ರಾಮದ ಜೇನುಗೂಡು ಮಹಿಳಾ ಸಂಘ ಹಾಗೂ ವಿವಿಧ ಸ್ವಸಹಾಯ ಸಂಘಗಳ ಪ್ರತಿನಿಧಿಗಳು, ಸದಸ್ಯೆಯರು ಮತ್ತು ಕಿಶೋರಿಯರು ಇದ್ದರು. ಕೆವಿನ್ ಶ್ರೀಲತ ಕಾರ್ಯಕ್ರಮ ನಿರೂಪಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


