ಬೆಳಗಾವಿ: ರಾಜ್ಯದಲ್ಲಿ ಅಕಾಲಿಕವಾಗಿ ಸುರಿದ ಮಳೆಯಿಂದ ನಷ್ಟ ಅನುಭವಿಸಿರುವ ರೈತರಿಗೆ ಕೇಂದ್ರ ಸರಕಾರದ ಅನುದಾನಕ್ಕೆ ಕಾಯದೇ ತತ್ ಕ್ಷಣ ಪರಿಹಾರ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸದನದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಸಲಹೆ ನೀಡಿದರು.
ಪ್ರವಾಹದ ಕುರಿತು ನಿಯಮ 69ರ ಅಡಿಯಲ್ಲಿ ನಡೆಯುತ್ತಿರುವ ಚರ್ಚೆಯ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯಆರ್. ವಿ. ದೇಶಪಾಂಡೆ ಮಾತಿಗೆ ಬೆಂಬಲ ಸೂಚಿಸಿ ಮಾತನಾಡಿದ ಯಡಿಯೂರಪ್ಪ, ಅತಿವೃಷ್ಟಿ ಹಾನಿ ವಿಚಾರವಾಗಿ ದೇಶಪಾಂಡೆ ಮಾತು ವಾಸ್ತವಿಕ ಸತ್ಯ ಎಂದು ಸಮ್ಮತಿ ಸೂಚಿದರು.
ರೈತರಿಗೆ ಹೆಚ್ಚಿನ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ, ಅವರಿಗೂ ವಾಸ್ತವಿಕ ಸ್ಥಿತಿ ಗೊತ್ತಿದೆ. ಕೇಂದ್ರ ಸರಕಾರ ತಜ್ಞರ ಸಮಿತಿ ಕಳಿಸಿ ಪರಿಶೀಲಿಸಲಿದೆ. ಕೇಂದ್ರದಿಂದ ಹಣ ಬರುವವರೆಗೂ ಕಾಯಲು ಹೋಗಬೇಡಿ, ಬೇರೆ ಎಲ್ಲ ಕೆಲಸ ಬದಿಗೊತ್ತಿ ದೇಶಪಾಂಡೆ ಅವರ ಮಾತನ್ನು ಗಮನದಲ್ಲಿ ಇಟ್ಟುಕೊಂಡು ಪರಿಹಾರ ನೀಡಿ ಎಂದು ಸಿಎಂಗೆ ಸಲಹೆ ನೀಡಿದರು.
ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಮಾಡಿದವರ ಕೂಲಿಯನ್ನು 1-2 ತಿಂಗಳು ಕೊಡದಿದ್ದರೆ ಅವರ ಜೀವನ ಸಾಗುವುದು ಹೇಗೆ? ರೈತರಿಗೆ ಬಿತ್ತನೆ ಬೀಜಕ್ಕೂ ಜೇಬಲ್ಲಿ ಹತ್ತು ಪೈಸೆ ಇಲ್ಲದಂತಹ ಸನ್ನಿವೇಶ ಇದೆ. ರಾಜ್ಯದ ಬೊಕ್ಕಸದಿಂದ ಬೇರೆ ಅಭಿವೃದ್ಧಿ ಕಾರ್ಯಗಳಿಗೆ ಕೊಡುವ ಹಣ ನಿಲ್ಲಿಸಿ ಇದಕ್ಕೆ ಆದ್ಯತೆ ಕೊಟ್ಟು ಕೂಲಿ ಕಾರ್ಮಿಕರ ರಕ್ಷಣೆ ಮಾಡಿ ಎಂದು ಬಿಎಸ್ವೈ ಮನವಿ ಮಾಡಿದರು.
ಇನ್ನೂ ಯಡಿಯೂರಪ್ಪನವರ ಮಾತಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ಬೆಂಬಲ ಸೂಚಿಸಿ, ಯಡಿಯೂರಪ್ಪ ಮಾತಿಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಲಿದೆ. ಸರಕಾರ ತತ್ ಕ್ಷಣ ನಿರ್ಧಾರ ತೆಗೆದುಕೊಂಡು ಪರಿಹಾರ ನೀಡಲಿ ಎಂದು ಆಗ್ರಹಿಸಿದರು. ಜೆಡಿಎಸ್ ಸದಸ್ಯ ಎಚ್. ಡಿ. ರೇವಣ್ಣ ಕೂಡ ಯಡಿಯೂರಪ್ಪ ಮಾತಿಗೆ ಬೆಂಬಲ ವ್ಯಕ್ತಪಡಿಸಿದರು.
ನಿಮ್ಮ ಸುದ್ದಿಗಳನ್ನು ಕಳುಹಿಸಿ: nammatumakuru9@gmail.com
ವಾಟ್ಸಾಪ್ ಗ್ರೂಪ್ ಸೇರಿ:
https://chat.whatsapp.com/E7Brl0d8zXCJogP6c6GRcZ
ಜಾಹೀರಾತುಗಳಿಗಾಗಿ ಸಂಪರ್ಕಿಸಿ: 97417 17700