ತುಮಕೂರು: ಕಳೆದ ಎರಡು ದಶಕಗಳಿಂದ ಶಾಂತವಾಗಿದ್ದ ಪಾವಗಡ ತಾಲ್ಲೂಕಿನಲ್ಲಿ ಮತ್ತೆ ನಕ್ಸಲ್ ಹಾಗೂ ಬ್ಲ್ಯಾಕ್ ಮೇಲ್ ಚಟುವಟಿಕೆಗಳು ಮುನ್ನೆಲೆಗೆ ಬಂದಿವೆ. ಪೀಪಲ್ಸ್ ವಾರ್ ಜನಶಕ್ತಿ ಪಾರ್ಟಿ ಹಾಗೂ ಕಾಮ್ರೆಡ್ ದೇವಣ್ಣ ದಳಂ ಹೆಸರಿನಲ್ಲಿ ಬಂದಿರುವ ಬೆದರಿಕೆ ಪತ್ರವು ಗಡಿ ಭಾಗದ ಸಾರ್ವಜನಿಕರಲ್ಲಿ ಮತ್ತು ರೈತರಲ್ಲಿ ತೀವ್ರ ಆತಂಕವನ್ನುಂಟು ಮಾಡಿದೆ.
ತಾಲ್ಲೂಕಿನ ಗಂಗಾಸಾಗರ ಗ್ರಾಮದ ವಾಸಿಯಾದ ಮುತ್ತುಕುಂಟ ಭೂಪಪ್ಪ ಅವರ ತೋಟದ ಗೇಟ್‌ಗೆ ತೆಲುಗಿನಲ್ಲಿ ಬರೆದಿರುವ ಬೆದರಿಕೆ ಪತ್ರವನ್ನು ಅಂಟಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಗುರುವಾರ ಬೆಳಕಿಗೆ ಬಂದಿರುವ ಈ ಕೃತ್ಯವು ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಆಂಧ್ರ ಪ್ರದೇಶ ವಿಳಾಸ ಹೊಂದಿರುವ ಪೀಪಲ್ಸ್ ವಾರ್ ಜನಶಕ್ತಿ ಪಾರ್ಟಿ ಹಾಗೂ ದೇವಣ್ಣ ದಳಂ ಹೆಸರಿನ ಈ ಪತ್ರದಲ್ಲಿ, ಕನಿಕಲಬಂಡೆ ಗ್ರಾಮದ ಉಪ್ಪಾರ ವೆಂಕಟೇಶ್ ಎಂಬಾತನ ವಿರುದ್ಧದ ಪ್ರಕರಣಗಳ ಖರ್ಚಿಗಾಗಿ ಮತ್ತು ಪಕ್ಷದ ಬೆಳವಣಿಗೆಗೆ ಹಣದ ಅಗತ್ಯವಿದೆ ಎಂದು ಉಲ್ಲೇಖಿಸಲಾಗಿದೆ. ಸೆಪ್ಟೆಂಬರ್ 16ರೊಳಗೆ ವಕೀಲ ಸುಬ್ಬರಾಯಪ್ಪ ಅವರ ಮೂಲಕ ಐದು ಲಕ್ಷ ರೂಪಾಯಿ ಹಣವನ್ನು ಕಳುಹಿಸಿಕೊಡುವಂತೆ ತಾಕೀತು ಮಾಡಲಾಗಿದೆ. ಒಂದು ವೇಳೆ ಹಣ ನೀಡಲು ವಿಫಲವಾದರೆ ಅಥವಾ ಈ ವಿಷಯವನ್ನು ಪೊಲೀಸರಿಗೆ ಅಥವಾ ಯಾರಿಗಾದರೂ ತಿಳಿಸಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಪತ್ರದಲ್ಲಿ ಎಚ್ಚರಿಕೆ ನೀಡಲಾಗಿದೆ.
ಪತ್ರವನ್ನು ಕಂಡು ಬೆಚ್ಚಿಬಿದ್ದ ರೈತ ಭೂಪಪ್ಪ ಅವರು ತಕ್ಷಣವೇ ಕಾಗದ ಪತ್ರ ಸಮೇತ ಪಾವಗಡ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಈ ಘಟನೆಯ ವಿಷಯ ಹೊರಬರುತ್ತಿದ್ದಂತೆ ಗಂಗಾಸಾಗರ, ಕನಿಕಲಬಂಡೆ, ಹೊಸಸಮುದ್ರ, ಕೆಂಚಿಗಾನಹಳ್ಳಿ, ಅಚ್ಚಮ್ಮನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ತೀವ್ರ ಆತಂಕಕ್ಕೀಡಾಗಿದ್ದಾರೆ.
ಪಾವಗಡ ತಾಲ್ಲೂಕು ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿದ್ದು ಅರಣ್ಯ ಹಾಗೂ ಬೆಟ್ಟಗುಡ್ಡಗಳಿಂದ ಕೂಡಿದೆ. ಈ ಹಿಂದೆ 1997 ರಿಂದ 2005 ರವರೆಗೆ ತಾಲ್ಲೂಕಿನಲ್ಲಿ ನಕ್ಸಲ್ ಚಟುವಟಿಕೆಗಳು ಉತ್ತುಂಗದಲ್ಲಿದ್ದವು. 2005 ರಲ್ಲಿ ಆಂಧ್ರದ ರೊದ್ದಂ ಪೊಲೀಸ್ ಠಾಣೆ ಬಾಂಬ್ ಸ್ಫೋಟ ಹಾಗೂ ತಾಲ್ಲೂಕಿನ ವೆಂಕಟಮ್ಮನಹಳ್ಳಿ ಸರ್ಕಾರಿ ಶಾಲೆಯ ಬಳಿ ನಕ್ಸಲರು ಮತ್ತು ಪೊಲೀಸರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಖಾಸಗಿ ಬಸ್ ಕ್ಲೀನರ್ ಸೇರಿದಂತೆ ಏಳು ಮಂದಿ ಪೊಲೀಸರು ಹತ್ಯೆಯಾಗಿದ್ದರು. ಆ ಬಳಿಕ ಹೆಚ್ಚಿನ ಪೊಲೀಸ್ ಕಾರ್ಯಾಚರಣೆ ನಡೆಸಿ ನಕ್ಸಲರನ್ನು ಮಟ್ಟಹಾಕಿದ ನಂತರ ತಾಲ್ಲೂಕಿನಲ್ಲಿ ಶಾಂತಿಯ ವಾತಾವರಣ ನಿರ್ಮಾಣವಾಗಿತ್ತು.
ಇತ್ತೀಚೆಗೆ ಕನಿಕಲಬಂಡೆ ಉಪ್ಪಾರ ವೆಂಕಟೇಶ್ ಹಾವಳಿ ಹೆಚ್ಚಾಗಿದ್ದು, ರಸ್ತೆಯಲ್ಲಿ ಓಡಾಡುವವರಿಂದ ಹಣ ಲೂಟಿ ಹಾಗೂ ದೌರ್ಜನ್ಯವೆಸಗುತ್ತಿದ್ದ. ಈ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಗ್ರಾಮಕ್ಕೆ ಪ್ರವೇಶಿಸಿದಾಗ ಸಮೀಪದ ಬೆಟ್ಟದ ಮೇಲೆಯೇ ಬಾಂಬ್ ಸ್ಫೋಟಿಸಿ ಆತ ಪರಾರಿಯಾಗಿದ್ದ. ಆತನ ಬಂಧನಕ್ಕೆ ಪೊಲೀಸರು ಬಲೆಬೀಸಿದ ಹಿನ್ನೆಲೆಯಲ್ಲಿ ಆಗಸ್ಟ್ 29 ರಂದು ಕನಿಕಲಬಂಡೆ ಗ್ರಾಮದ ಹೊರವಲಯದಲ್ಲಿ ಪಂಪ್‌ಸೆಟ್‌ಗೆ ನಾಡಬಾಂಬ್ ಫಿಕ್ಸ್ ಮಾಡಲಾಗಿದ್ದು, ಮೋಟಾರ್ ಆನ್ ಮಾಡುತ್ತಿದ್ದಂತೆ ಸ್ಫೋಟಗೊಂಡು ರೈತ ಕರಿಯಣ್ಣ ಪ್ರಾಣಾಪಾಯದಿಂದ ಪಾರಾಗಿದ್ದರು. ಆ ಘಟನೆಯ ಕುರಿತು ಪೊಲೀಸರು ತನಿಖೆಯಲ್ಲಿ ನಿರತರಾಗಿರುವಾಗಲೇ ಈ ಐದು ಲಕ್ಷ ರೂಪಾಯಿ ಬೇಡಿಕೆಯ ಪತ್ರವು ಮುನ್ನೆಲೆಗೆ ಬಂದಿರುವುದು ತೀವ್ರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಇದು ಉಪ್ಪಾರ ವೆಂಕಟೇಶ್ ನ ತಂತ್ರವಾಗಿರಬಹುದು ಎಂಬ ಶಂಕೆಯನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದು, ಈ ಕುರಿತು ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
