ಸರಗೂರು: ತಾಲ್ಲೂಕು ಹಾದನೂರು ಗ್ರಾಪಂ ವ್ಯಾಪ್ತಿಯ ಯಶವಂತಪುರ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಮೂರು ಕೊಳವೆ ಬಾವಿಗಳಿವೆ. ಎರಡು ಕೊಳವೆ ಬಾವಿಯಲ್ಲಿ ನೀರಿಲ್ಲ. ಒಂದರಲ್ಲಿ ಮೋಟಾರ್ ಮತ್ತು ಪೈಪ್ ಗಳಿಲ್ಲ. ಬದಲಾವಣೆ ಮಾಡಲು ಸಹ ಅವಕಾಶಗಳಿಲ್ಲ. 150 ಕುಟುಂಬಗಳಿಗೂ ಹೆಚ್ಚು ದಲಿತ, ಆದಿವಾಸಿ, ಇತರೆ ಸಮುದಾಯದ ಕುಟುಂಬಗಳ ಜನರು ವಾಸಿಸುತ್ತಿದ್ದು ಕಳೆದ ಒಂದು ವಾರದಿಂದ ಕುಡಿಯುವ ನೀರಿಗೆ ಸಮಸ್ಯೆಯಾಗಿದೆ.
ಗ್ರಾಮ ಪಂಚಾಯತಿಯಲ್ಲಿ ಯಾವುದೇ ಅನುಧಾನದಲ್ಲಿ ಹಣ ಇಲ್ಲವೆಂದು ತಾಲ್ಲೋಕು ಪಂಚಾಯ್ತಿ ಕಾರ್ಯ ನಿರ್ವಹಕಾಧಿಕಾರಗಳಿಗೆ ವರದಿ ನೀಡಿ ಮನವಿ ಸಲ್ಲಿಸಲಾಗಿದೆ. ಆದರೂ ಸಹ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದರಿಂದಾಗಿ ಕುಡಿಯಲು ಒಂದು ಹನಿ ನೀರಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಅಕ್ಕಪಕ್ಕದ ಪಂಪ್ ಸೆಟ್ ಗಳಿಂದ ಗ್ರಾಮದ ಮಹಿಳೆಯರು ಬಿಂದಿಗೆ ಇಟ್ಟುಕೊಂಡು ತಲೆ ಮೇಲೆ ಹೊತ್ತು, ಬೈಕ್ ಗಳಲ್ಲಿ ಬಿಂದಿಗೆ ಕಟ್ಟಿ ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಗ್ರಾಮದ ಯುವ ಜನರಾದ ಸ್ವಾಮಿ, ವಾಸು, ಪ್ರೀತಮ್, ನಾಗರಾಜು, ವಿನಯ್, ಕುಮಾರ್, ರಾಜೇಶ್, ಸಂತೋಷ್, ಮಾದಪ್ಪ, ಚಲುವ, ರಮೇಶ, ಗಣೇಶ್, ಮತ್ತಿತರರು ಅಕ್ಕಪಕ್ಕದ ಜಮೀನಿನ ಪಂಪ್ ಸೆಟ್ ಗಳ ಮೂಲಕ ಪೈಪ್ ಗಳನ್ನು ಜೋಡಿಸಿ ಮನೆಗಳಿಗೆ ಕುಡಿಯುವ ನೀರನ್ನು ಸಂಗ್ರಹಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.
ಖಾಲಿ ಇರುವ ಕೊಳವೆ ಬಾವಿಗೆ ಟಾಸ್ಕ್ ಫೋರ್ಸ್ ಅನುಧಾನದಲ್ಲಿ ಮೋಟರ್ ಮತ್ತು ಪೈಪ್ ಅಳವಡಿಸಿದರೆ ನೀರು ಬರುತ್ತದೆ ಬೇಕಾದ ಮೋಟರ್ ಮತ್ತು ಪೈಪ್ ಅಳವಡಿಸುವಂತೆ ಮನವಿ ಮಾಡಿದರೂ, ಕಳೆದ ಒಂದು ವಾರದಿಂದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಬದಲಿ ಏನಾದರೂ ಗ್ರಾಮ ಪಂಚಾಯತಿ ವತಿಯಿಂದ ನಿರ್ಣಯ ಕೈಗೊಳ್ಳಲು ಲೋಕಸಭಾ ಚುನಾವಣೆ ನೀತಿ ಸಂಹಿತೆ ತೊಡಕಾಗಿದೆ. ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಇದ್ದು ಇಲ್ಲದಂತಾಗಿದೆ. ಯಾವುದೇ ನಿರ್ಣಯ ಕೈಗೊಳ್ಳಲು ಸಹಕಾರ ಸಿಗುತ್ತಿಲ್ಲ.
ಆದ್ದರಿಂದ, ಕೂಡಲೇ ತಹಸೀಲ್ದಾರ್ ರವರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಖಾಲಿ ಇರುವ ಕೊಳವೆ ಬಾವಿಗೆ ಮೋಟಾರ್ ಮತ್ತು ಪೈಪ್ ಗಳನ್ನು ಅಳವಡಿಸಬೇಕು. ಗುತ್ತಿಗೆ ಆಧಾರದಲ್ಲಿ ಬೋರ್ ವೆಲ್ ಗಳನ್ನು ಪಡೆಯಲು ಸಹ ದೂರ ಇರುವ ಕಾರಣ ಟ್ಯಾಂಕರ್ ಮೂಲಕವಾದರೂ, ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಗ್ರಾಮ ಪಂಚಾಯತಿ ಸದಸ್ಯರಾದ ಶಿವಲಿಂಗಯ್ಯ ಒತ್ತಾಯಿಸಿದ್ದಾರೆ.
ವರದಿ: ಚಂದ್ರ ಹಾದನೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296