ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್)ಯ ವೇಳೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಿದ ಯುವತಿಯರಿಗೆ ಬ್ರಾ ಗಳನ್ನು ತೆಗೆಯುವಂತೆ ಸೂಚಿಸಿದ ಪ್ರಕರಣ ಕುರಿತು ತನಿಖೆಗೆ ಆದೇಶಿಸಲಾಗಿದೆ.
ಮಾನವ ಹಕ್ಕುಗಳ ಆಯೋಗ ಈ ಬಗ್ಗೆ ತನಿಖೆ ನಡೆಸಿ ೧೫ ದಿನಗಳಲ್ಲಿ ಕೊಲ್ಲಂ ಗ್ರಾಮಾಂತರ ಎಸ್ಪಿಗೆ ವರದಿ ಸಲ್ಲಿಸುವಂತೆ ಸೂಚಿಸಿದೆ. ಇದರ ಬೆನ್ನಲ್ಲೆ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಚುರುಕುಗೊಳಿಸಿದ್ದಾರೆ.
ಬ್ರಾ ಗಳನ್ನು ತೆಗೆಯುವಂತೆ ಸಿಬ್ಬಂದಿ ಒತ್ತಾಯಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಪೋಷಕರೂ ಕೂಡ ಸಿಡಿಮಿಡಿಗೊಂಡಿದ್ದಾರೆ. ಈ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ನೀಟ್ ಪರೀಕ್ಷೆ ಬರೆದ ಮಹಿಳೆಯ ತಂದೆ ಕೊಟ್ಟಾರಕರ ಪೊಲೀಸರಿಗೆ ದೂರು ನೀಡಿದ್ದರು. ಚಾತಮಂಗಲಂನಲ್ಲಿರುವ ಪರೀಕ್ಷಾ ಕೊಠಡಿಗೆ ಪ್ರವೇಶಿಸುವ ಮೊದಲು ನನ್ನ ಪುತ್ರಿ ಸೇರಿದಂತೆ ಮಹಿಳಾ ನೀಟ್ ಆಕಾಂಕ್ಷಿಗಳು ತಮ್ಮ ಒಳ ಉಡುಪನ್ನು ತೆಗೆಯುವಂತೆ ಸಿಬ್ಬಂದಿ ಸೂಚಿಸಿದ್ದಾರೆ. ಇದರಿಂದಾಗಿ ಪರೀಕ್ಷೆ ಬರೆಯಲು ಮಹಿಳಾ ಆಕಾಂಕ್ಷಿಗಳಿಗೆ ಮಾನಸಿಕ ಹಿಂಸೆಯಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಾಥಮಿಕ ತಪಾಸಣೆಯ ಬಳಿಕ ಲೋಹ ಶೋಧಕದಿಂದ ಮಹಿಳೆಯರ ಒಳ ಉಡುಪಿನ ಕೊಕ್ಕೆ ಪತ್ತೆಯಾಯಿತು. ಈ ವೇಳೆ ಸಿಬ್ಬಂದಿ ಅದನ್ನು ತೆಗೆದುಹಾಕಲು ಹೇಳಿದರು. ಈ ರೀತಿ ಶೇ. ೯೦ ರಷ್ಟು ಮಹಿಳಾ ಅಭ್ಯರ್ಥಿಗಳು ತಮ್ಮ ಒಳ ಉಡುಪನ್ನು ತೆಗೆದು ಸ್ಟೋರ್ ರೂಂನಲ್ಲಿ ಇಡಬೇಕಾಯಿತು. ಇದಾದ ಬಳಿಕ ಪರೀಕ್ಷೆ ಬರೆಯುವಾಗ ಅಭ್ಯರ್ಥಿಗಳು ಮಾನಸಿಕವಾಗಿ ತೊಂದರೆ ಅನುಭವಿಸಬೇಕಾಯಿತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ರೂಪಿಸಿರುವ ವಸ್ತ್ರ ಸಂಹಿತೆಯಲ್ಲಿ ಒಳ ಉಡುಪುಗಳನ್ನು ತೆಗೆದು ಹಾಕಲು ಸೂಚಿಸಿಲ್ಲ ಎಂದು ದೂರುದಾರರು ಹೇಳಿದ್ದಾರೆ.ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯೊಬ್ಬಳು ದೂರು ನೀಡಿದ ಹಿನ್ನೆಲೆಯಲ್ಲಿ ಭಾರತೀಯ ದಂಡ ಸಂಹಿತೆ ೩೫೪ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲ್ಲಂ ಜಿಲ್ಲೆಯ ಆಯುರ್‌ನಲ್ಲಿರುವ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ನಡೆದ ನೀಟ್ ಪರೀಕ್ಷೆಗೆ ಹಾಜರಾಗುವ ವೇಳೆ ಅವಮಾನಕರ ಅನುಭವವನ್ನು ಎದುರಿಸಿದ ಬಗ್ಗೆ ದೂರು ನೀಡಿದರು.
ಮಹಿಳಾ ಅಧಿಕಾರಿಗಳ ತಂಡವು ವಿದ್ಯಾರ್ಥಿನಿಯ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರದಿ ಆಂಟೋನಿ ಬೇಗೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy