ಮೇಕೆ ಹಾಗೂ ಕುರಿ ಕಾಯುತ್ತಿದ್ದ ಹೊಸಬೀರ್ವಾಳು ಗ್ರಾಮದ ಸುಮಾರು 45 ವರ್ಷದ ಸಿದ್ದರಾಜು ಎಂಬುವವರು ನುಗು ಜಲಾಶಯದ ಹಿನ್ನೀರಿನಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ.
ಸುಮಾರು 20 ರಿಂದ 25 ಮೇಕೆ ಹಾಗೂ ಕುರಿ ಸಾಕಾಣಿಕೆ ಮಾಡಿಕೊಂಡಿದ್ದ ಇವರು ಪ್ರತಿ ನಿತ್ಯ ಜಾನುವಾರುಗಳಿಗೆ ಮೇವು ಒದಗಿಸಲು ಪಾಳು ಬಿದ್ದಿರುವ ಜಮೀನು ಹಾಗೂ ಸರ್ಕಾರಿ ಖರಾಬು ಸ್ಥಳಗಳನ್ನು ಅವಲಂಬಿಸಿದ್ದರು. ಪ್ರತಿನಿತ್ಯ ಸಿದ್ದರಾಜು ರವರು ತಮ್ಮ ಪತ್ನಿಯ ಜೊತೆ ಕಾಯಕದಲ್ಲಿ ತೊಡಗಿಕೊಂಡಿದ್ದರು ಆದರೆ ಆ ದಿನ ಅವರ ಪತ್ನಿ ಬೇರೆ ಕೆಲಸದ ನಿಮಿತ್ತ ಹುಲ್ಲಹಳ್ಳಿ ಗ್ರಾಮಕ್ಕೆ ಹೋಗಿದ್ದರು. ಹಾಗಾಗಿ ಅಂದು ಅವರೊಡನೆ ಅವರ ಮೊಮ್ಮಗನಾದ ಯಶವಂತ ಜೊತೆಯಲ್ಲಿದ್ದರು. ಸ್ನಾನ ಮಾಡಿ ಬರುತ್ತೇನೆ ದಡದಲ್ಲಿಯೇ ಕುಳಿತಿರು ಎಂದು ಮೊಮ್ಮಗನಿಗೆ ಹೇಳಿ ನೀರಿಗೆ ಇಳಿದಿದ್ದಾರೆ. ಅಷ್ಟರಲ್ಲೇ ಅವರು ಮದ್ಯ ಸೇವಿಸಿದ ಕಾರಣ ನೀರಿನಲ್ಲಿ ಜಾರಿ ಬಿದ್ದಿದ್ದಾರೆ. ಸುಮಾರು 10 ರಿಂದ 15 ನಿಮಿಷಗಳ ನಂತರವೂ ಇವರು ಮೇಲೆ ಬರದಿದ್ದನ್ನು ಗಮನಿಸಿದ ಅವರ ಮೊಮ್ಮಗ ಗ್ರಾಮದ ಬಸ್ ನಿಲ್ದಾಣದಲ್ಲಿ ನೆರೆದಿದ್ದ ಸ್ಥಳೀಯರ ಗಮನಕ್ಕೆ ವಿಷಯವನ್ನು ಮುಟ್ಟಿಸಿದ್ದಾನೆ.
ವಿಷಯ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿ ಅಲ್ಲೇ ಇದ್ದ ದೋಣಿಯ ಮೂಲಕ ಸತೀಶ, ನಂದೀಶ ಹಾಗೂ ಸಿದ್ದರಾಜು ಎಂಬುವವರು ನೀರಿಗೆ ಇಳಿದು ಅರ್ಧ ಗಂಟೆಗಳ ಕಾಲ ಶೋಧ ನಡೆಸಿ ದೇಹವನ್ನು ಮೇಲಕ್ಕೆತ್ತಿದ್ದಾರೆ. ಅಷ್ಟರಲ್ಲಿ ಜೀವ ಹೋಗಿರುವುದನ್ನು ಗ್ರಾಮಸ್ಥರು ದೃಢ ಪಡಿಸಿಕೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅವರ ಪತ್ನಿ ಹಾಗೂ ಸಂಬಂಧಿಕರ ಗೋಳು ಮುಗಿಲು ಮುಟ್ಟಿತ್ತು. ತರುವಾಯ ಸಂಬಂಧಿಕರು ಶವ ಸಂಸ್ಕಾರವನ್ನು ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗ್ರಾಮೀಣ ಮಹೇಶ್, ಮದ್ಯ ಮಾರಾಟ ಮಾಡಲು ಪರವಾನಗಿ ಇಲ್ಲದಿದ್ದರೂ ಮನೆಯಲ್ಲಿ ಅಕ್ರಮ ದಾಸ್ತಾನು ಮಾಡಿಕೊಂಡು ಮದ್ಯಪ್ರಿಯರ ಬಳಿಗೆ ನೇರವಾಗಿ ಮದ್ಯಪಾನ ಮಾರಾಟ ಮಾಡುವವರ ಸುಳಿವನ್ನು ಸರಗೂರು ಪೊಲೀಸ್ ಠಾಣೆ ಹಾಗೂ ಅಬಕಾರಿ ಇಲಾಖೆ ಗಮನಕ್ಕೆ ತರಲಾಗಿತ್ತು. ನಾವು ನೀಡಿದ ಸುಳಿವಿನಂತೆ ಅಕ್ರಮ ಮದ್ಯ ಮಾರಾಟ ಮಾಡುವವರನ್ನು ಅಧಿಕಾರಿಗಳು ಬಂದು ವಿಚಾರಿಸಿಕೊಂಡು ಹೋಗಿದ್ದಾರೆ. ಅದಾದ ನಂತರ ಭಯದಲ್ಲಿ ಮಾರಾಟ ಮಾಡುತ್ತಿದ್ದ ವ್ಯಕ್ತಿಗಳು ಬಹಳ ಧೈರ್ಯವಾಗಿ ಮಾರಾಟ ಮಾಡುತ್ತಿದ್ದಾರೆ ಅಂದರೆ ಏನು ಅರ್ಥ ? ಈ ವಿಷಯವಾಗಿ ಮೃತರ ಸಂಬಂಧಿಕರು ಒಪ್ಪಿದರೆ ಮೈಸೂರು ಜಿಲ್ಲಾಧಿಕಾರಿಗಳಿಗೆ ದೂರು ಕೊಡಲಾಗುವುದು ಎಂದು ತಿಳಿಸಿದರು.