ಬೆಂಗಳೂರು: ರಾಜ್ಯದಲ್ಲಿ ಏಡ್ಸ್ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿದ್ದು, ಏಡ್ಸ್ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಂಗಳೂರಿನ ದೇವರಾಜ ಅರಸು ಟ್ರಕ್ ಟರ್ಮಿನಲ್ ನಲ್ಲಿ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಆಯೋಜಿಸಿದ್ದ ವಿಶ್ವ ಏಡ್ಸ್ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಕಳೆದ ವರ್ಷ ರಾಜ್ಯದಲ್ಲಿ 13,183 ಪ್ರಕರಣಗಳು ವರದಿಯಾಗಿದ್ದು, ಈ ಸಾಲಿನಲ್ಲಿ ಅಕ್ಟೋಬರ್ ವರೆಗೆ 7,720 ಪ್ರಕರಣಗಳು ಪತ್ತೆಯಾಗಿವೆ. ಗರ್ಭಿಣಿಯರಲ್ಲಿ ಕಳೆದ ವರ್ಷ 539 ಸೋಂಕು, ಈ ವರ್ಷ ಅಕ್ಟೋಬರ್ ವರೆಗೆ 247 ಸೋಂಕು ವರದಿಯಾಗಿವೆ. ಗರ್ಭಿಣಿಯರಲ್ಲಿ ಸೋಂಕು ದೃಢಪಡುವ ಪ್ರಮಾಣ ಶೇ.0.03ರಷ್ಟಿದೆ. ಇದನ್ನು ಶೂನ್ಯಕ್ಕೆ ಇಳಿಸುವ ಗುರಿಯೊಂದಿಗೆ ನಾವೆಲ್ಲರೂ ಕೆಲಸ ಮಾಡಬೇಕು ಎಂದರು.
ಟ್ರಕ್ ಚಾಲಕರು, ಕೆಲಸದ ಮೇಲೆ ಪ್ರಯಾಣ ಮಾಡುವವರು, ಲೈಂಗಿಕ ಕಾರ್ಯಕರ್ತರು, ಮಾದಕವಸ್ತುಗಳನ್ನು ಸ್ವೀಕರಿಸುವವರಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿರುತ್ತದೆ. ಸುರಕ್ಷಿತ ಲೈಂಗಿಕ ಕ್ರಿಯೆಯೇ ಮಾರಣಾಂತಿಕ ಕಾಯಿಲೆಯಿಂದ ಪಾರಾಗಲು ದಾರಿ. ಲೈಂಗಿಕ ಕಾರ್ಯಕರ್ತೆಯರನ್ನು ಸಮಾಜದ ಮುಖ್ಯ ವಾಹಿನಿಯಿಂದ ಹೊರಗೆ ಇಟ್ಟಿರುವ ಕಾರಣ ಗಂಡಾಂತರಗಳು ಉಂಟಾಗುತ್ತಿವೆ. ಆದರೆ, ಅವರನ್ನು ಮಾನವೀಯತ ದೃಷ್ಟಿಯಿಂದ ನೋಡದಿದ್ದರೆ ಏಡ್ಸ್ ನಿಯಂತ್ರಣ ಅಸಾಧ್ಯ ಎಂದು ತಿಳಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/HirBanj7uz4I4A2vAG5yXx