ಮಧುಗಿರಿ: ಸಾರ್ವಜನಿಕರ ಕೆಲಸ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ ಹಾಗೂ ಅಧಿಕಾರದ ದರ್ಪ ಎದ್ದು ಕಾಣುತ್ತಿದ್ದು, ಜನಸೇವೆಯ ಮನೋಭಾವ ಕಾಣುತ್ತಿಲ್ಲ ಹಾಗೂ ಇಂದು ಕರೆದಿರುವ ಸಭೆಗೆ ಸಾರ್ವಜನಿಕರು ಬಾರದಿರುವ ಬಗ್ಗೆ ಪ್ರಚಾರದ ಕೊರತೆಯ ಬಗ್ಗೆಗೂ ಲೋಕಾಯುಕ್ತ ಅಧೀಕ್ಷಕ ಲಕ್ಷ್ಮೀನಾರಾಯಣ್ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ನಡೆದ ಲೋಕಾಯುಕ್ತ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಭೆಗೆ ಕನಿಷ್ಟ 10 ದೂರುಗಳು ಬಂದಿಲ್ಲ. ಯಾಕೆ ಸಾರ್ವ ಜನಿಕರಿಗೆ ಮಾಹಿತಿ ನೀಡಿಲ್ಲವೇ ಎಂದು ತಾ.ಪಂ.ಇಓ ರವರನ್ನು ಪ್ರಶ್ನಿಸಿದರು.
ಎಲ್ಲ ಇಲಾಖೆಯ ಕಚೇರಿಯಲ್ಲಿ ಲೋಕಾಯುಕ್ತಕ್ಕೆ ದೂರು ನೀಡಲು ಸಮಗ್ರ ಮಾಹಿತಿ ಒಳಗೊಂಡ ನಾಮಫಲಕ ಹಾಕಬೇಕಿದ್ದು, ಶೇ.90 ರಷ್ಟು ಇಲಾಖೆಗಳು ಹಾಕಿಲ್ಲ ಸಾರ್ವಜನಿಕರಿಂದ ಬಂದಂತಹ ಅರ್ಜಿಗಳನ್ನು ಅಂದೇ ವಿಲೇವಾರಿ ಮಾಡಿದರೆ ಅರ್ಧ ಕೆಲಸ ಮುಗಿಯುತ್ತದೆ. ಆದರೆ ನೀವು ಬೇಕಂತಲೇ ತಡ ಮಾಡುವುದಲ್ಲದೆ ಅರ್ಜಿಯನ್ನು ವಜಾ ಮಾಡಲು ಕಾರಣ ಹುಡುಕುತ್ತೀರಾ ಬದಲಾಗಿ ಅರ್ಜಿಗೆ ನ್ಯಾಯ ಕೊಡಲು ಮಾರ್ಗ ಹುಡುಕಲ್ಲ. ಈ ಮನೋಭಾವದಿಂದ ನಿಮಗೆ ಇರುವ ಗೌರವ ಹಾಳಾಗಲಿದ್ದು, ಕರ್ತವ್ಯಕ್ಕೆ ನಿಷ್ಠರಾಗಿರಿ, ಯಾವ ಕಚೇರಿಯಲ್ಲಿ ಲೋಕಾಯುಕ್ತದ ನಾಮಫಲಕ ಇರುವುದಿಲ್ಲವೋ ಮುಂದಿನ ದಿನಗಳಲ್ಲಿ ಅಚ್ಚರಿಯ ಭೇಟಿ ನೀಡಿ ಸ್ಥಳದಲ್ಲೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದು ಅಧಿಕಾರಿಗಳ ಮೇಲೆ ಕಾನೂನು ಕ್ರಮಕ್ಕೆ ಕರುಣೆ ತೋರುವ ಜನಸಾಮಾನ್ಯರ ಬಗ್ಗೆಯೂ ಅಧಿಕಾರಿಗಳಿಗೆ ಕೊಂಚ ಕರುಣೆಯಿರಲಿ ಎಂದ ಅವರು, ಈ ಬಾರಿ ಪ್ರಚಾರದ ಕೊರತೆಯಿಂದ ಹೆಚ್ಚು ಸಾರ್ವಜನಿಕರು ಬಂದಿಲ್ಲ. ಮಧುಗಿರಿಗೆ ಮುಂದೆ ಬೇಗ ಇನ್ನೊಂದು ಸಭೆಯ ಕುರಿತು ಮಾಹಿತನ್ನು ನೀಡಲು ತಿಳಿಸಿದರು.
ಪುರಸಭೆ ಅಂಗಡಿ ಮಳಿಗೆಗಳ ಕೇಡು ಪುರಸಭೆಯಲ್ಲಿ ಹರಾಜಾದ ಅಂಗಡಿ ಮಳಿಗೆಯಲ್ಲಿ ಒಂದು ಮಳಿಗೆಯ ಬಗ್ಗೆ ಲೋಕಾಯುಕ್ತಕ್ಕೆ ದೂರು ಹೋಗಿದ್ದು, ಅದನ್ನು ವಿಚಾರಣೆಗೆ ಪಡೆಯುವಂತೆ ಸಲಹೆ ನೀಡಿದರು. ಬೇ ಖಾಕಿ ಉಳಿಸಿಕೊಂಡ ವ್ಯಕ್ತಿಗೆ ಮತ್ತೆ ಮಳೆಗೆ ಒದಗಿಸಿಕೊಟ್ಟು ಟೆಂಡರ್ ನಲ್ಲಿ ಹೆಚ್ಚು ಬೆಲೆಗೆ ಹರಾಜು ಕೂಗಿದವರಿಗೆ ಅನ್ಯಾಯ ಮಾಡಿರುವ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದು, ದಾಖಲೆ ಸಮೇತ ಮಾಹಿತಿ ಒದಗಿಸಲಾಗಿದೆ.
ವಿಚಾರಣೆಯಲ್ಲಿ ಈ ಬಗ್ಗೆ ವರದಿ ನೀಡಲು ಜಿಲ್ಲಾ ಕಚೇರಿಗೆ ಬರುವಂತೆ ಸಿ.ಓ.ಸುರೇಶ್ ರವರಿಗೆ ಸೂಚಿಸಲಾಯಿತು. ಮತ್ತೊಂದು ಪ್ರಕರಣದಲ್ಲಿ ದೂರು ದಾರ ಮಹೇಶ್ ಆರೋಪಿಸುವಂತೆ ಇ–ಖಾತೆ ನೀಡಲು ಮನವಿ ಮಾಡಿದ್ದು ಚೂಡಾ ನಿಯಮದಡಿ ಸಾಧ್ಯವಿಲ್ಲ ಎಂದು ಅನಧಿಕೃತ ಎಂದು ಹೇಳಿ ವಾಪಸ್ ಮಾಡಿದ್ದಾರೆ. ಆದರೆ ಎಂಎಆರ್ ನಂತ (ಮುನ್ಸಿವಲ್ ಅಸೆಸಿಎಮೆಂಟ್ ರಿಜಿಸ್ಟರ್) ನಲ್ಲಿರುವ ಒಬ್ಬರಿಗೆ ಇ–ಖಾತೆ ನೀಡಿದ್ದಾರೆಂದು ಆರೋಪಿಸಿದ್ದರು. ಇದಕ್ಕೆ ಉತ್ತರಿಸಿದ ಜಿ. ಸುರೇಶ್ ಆಗ ಅದು ಕಾನೂನು ಪರಿಧಿಯಲ್ಲಿ ಇರಲಿಲ್ಲ ಈಗ ಅರ್ಜಿ ನೀಡಿದರೆ ಪರಿಶೀಲಿಸಿ ತಿಂಗಳಲ್ಲೇ ಖಾತೆ ನೀಡುತ್ತೇನೆಂದರು.
ಪಿಡಿಓಗೆ ತಾಕೀತು:
5 ಸಾವಿರಕ್ಕೂ ಹೆಚ್ಚು ಲೋಡ್ ಕೆರೆಯ ಮಣ್ಣನ್ನು ಒಳಸಲು ಎನ್ ಜಿಓ ಸಂಸ್ಥೆಯೊಂದಕ್ಕೆ ಅನಧಿಕೃತವಾಗಿ ಅನುಮತಿ ನೀಡಿ, ರಾಜಧನ ಮನ್ನಗೊಳಿಸಿದ ಆರೋಪದ ದೂರು ಕೂಡ ಸಭೆಯಲ್ಲಿ ಚರ್ಚೆಗೆ ಬಂದಿದ್ದು, ಪಿಡಿಓ ಕಮಲ ಹೇಳಿಕೆಯನ್ನು ಕೇಳಿದ್ದು, ಸೂಕ್ತ ದಾಖಲಾತಿಯೊಂದಿಗೆ ಜಿಲ್ಲಾ ಕಚೇರಿಗೆ ಬರುವಂತೆ ತಾಕೀತು ಮಾಡಲಾಯಿತು. ಈ ಪ್ರಕರಣದಲ್ಲಿ 5715 ಲೋಡ್ ಕೆರೆಯ ಮಣ್ಣನ್ನು ರೈತರ ಮನವಿ ಮೇಲೆಗೆ ನೀಡಲಾಗಿದೆ ಎಂದು ಸಮಜಾಯಿಷಿ ನೀಡಿದರು. ಆದರೆ ಇದಕ್ಕೆ ತೃಪ್ತರಾಗದ ಎನ್ ಪಿ ರವರು ಈ ಬಗ್ಗೆ ಸಂಪೂರ್ಣ ದಾಖಲೆಗಳು ಸಂಬಂಧಿಸಿದ ಅಧಿಕಾರಿಗಳ ಲಿಖಿತ ದಾಖಲೆಯನ್ನು ಜಿಲ್ಲಾಕೇಂದ್ರದ ಕಚೇರಿಗೆ ತರುವಂತೆ ಸೂಚಿಸಿದರು. ತಹಶೀಲ್ದಾರ್ ಕಚೇರಿ ಆವರಣದ ಮಳಿಗೆಗಳ ಬಗ್ಗೆಯೂ ಚರ್ಚೆ ನಡೆಸಿದ್ದು, ಈ ಬಗ್ಗೆ ಕ್ರಮವಹಿಸುವಂತೆ ತಹಶೀಲ್ದಾರ್ ಗೆ ಸೂಚಿಸಿದಾಗ ಈ ಬಗ್ಗೆ ದೂರು ಬಂದಿದ್ದು, ಮೇಲಾಧಿಕಾರಿಗೆ ಮಾಹಿತಿ ನೀಡಿ ದೂರನ್ನು ವಿಲೇವಾರಿ ಮಾಡಲಾಗಿದೆ ಎಂದು ತಹಶೀಲ್ದಾರ್ ತಿಳಿಸಿದರು.
ಜೇಬಲ್ಲಿದ್ದ ಹಣದ ಲೆಕ್ಕ ಬರೆದಿಡಿ: ವೆಂಕಟೇಶ್
ನಿಯಮಾವಳಿಯಂತೆ ಪ್ರತಿ ಸರ್ಕಾರಿ ಅಧಿಕಾರಿ, ನೌಕರ, ಅರೆಕಾಲಿಕ ನೌಕರ ಕೂಡ ಕಚೇರಿಯ ಒಳಗೆ ಹೋಗುವಾಗ ನಗದು ವಹಿ ಪುಸ್ತಕವನ್ನು ಬರೆಯಬೇಕು. ಜೇಬಲ್ಲಿ ಹೋಗುವಾಗ ಹಣ ಎಷ್ಟಿತ್ತು ಎಂದು ಬರೆದಿಡಬೇಕು. ಹಾಗೂ ಒಳಗೆ ಮತ್ತು ಹೊರಗೆ ಬಂದು ಹೋಗುವಾಗ ಮೂವ್ ಮೆಂಟ್ ರಿಜಿಸ್ಟರ್ ಪಾಲಿಸಬೇಕು. ಈ ಬಗ್ಗೆ ಎಲ್ಲೂ ಸಹಿ ಹಾಕಿದ ನಿದರ್ಶನವಿಲ್ಲ. ಕಚೇರಿಗೆ ಬಂದ ಅರ್ಜಿಗಳ ಜವಾಲು ಸ್ವೀಕಾರ ಪುಸ್ತಕವನ್ನು ಸಮರ್ಥವಾಗಿ ನಿಭಾಯಿಸಿರಬೇಕು. ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಕೆಲಸ ಮಾಡುವವರು ಗುರುತಿನ ಚೀಟಿ ಹಾಕಿಕೊಂಡಿರಲ್ಲ. ನಿಮ್ಮ ಟೇಬಲ್ ಮುಂದೆ ನಿಮ್ಮ ಹೆಸರು ಹಾಗೂ ಸ್ಥಾನದ ಬಗ್ಗೆಯೂ ಮಾಹಿತಿಯಿಲ್ಲ ಎಂದು ಲೋಕಾಯುಕ್ತದ ಉಪ ಅಧೀಕ್ಷಕ ವೆಂಕಟೇಶ್ ಅಸಮಾಧಾನ ವ್ಯಕ್ತಪಡಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4