ಕೊರಟಗೆರೆ: 3 ಬಾರಿ ಜಿಪಂ ಸದಸ್ಯ, 2013ರಲ್ಲಿ ಶಾಸಕನಾಗಿ 5ವರ್ಷ ಸೇವೆ ಸಲ್ಲಿಸಿರುವ ಬಡಜನರ ಒಡನಾಡಿ, 2018ರ ವಿಧಾನಸಭೆ ಚುನಾವಣೆಯಲ್ಲಿ ಸೋತರು ಸಹ ಬಡಜನರ ಸೇವೆಯನ್ನು ಮಾಡುತ್ತೀರುವ ಪಿ.ಆರ್.ಸುಧಾಕರಲಾಲ್ ಕೊರಟಗೆರೆ ಕ್ಷೇತ್ರದ ನಿಜವಾದ ಜನನಾಯಕ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಬಣ್ಣಿಸಿದರು.
ಕೊರಟಗೆರೆ ಪಟ್ಟಣದ ಪಪಂ ಆವರಣದಲ್ಲಿ ಜಾತ್ಯಾತೀತ ಜನತಾದಳ ಪಕ್ಷದ ವತಿಯಿಂದ ಬುಧವಾರ ಏರ್ಪಡಿಸಲಾಗಿದ್ದ ಜನತಾ ಜಲಧಾರೆ ರಥಯಾತ್ರೆಯ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ರಾಜ್ಯದ ರೈತಾಪಿವರ್ಗ ಸಂಕಷ್ಟದ ಸ್ಥಿತಿಗೆ ತಲುಪಿದ್ದಾರೆ. ಎತ್ತಿನಹೊಳೆ ಯೋಜನೆಯ ಕಾಮಗಾರಿ ತೂಗಿಗತ್ತಿ ಮೇಲೆ ನಿಂತಿದೆ. ಕರ್ನಾಟಕ ರಾಜ್ಯದ ರೈತರಿಗೆ ಸಮರ್ಪಕ ನೀರಾವರಿ ಯೋಜನೆ ರೂಪಿಸುವುದೇ ಜನತಾ ಜಲಧಾರೆಯ ಉದ್ದೇಶ. ರೈತಾಪಿವರ್ಗ ಮತ್ತು ಬಡಜನರ ಅಭಿವೃದ್ದಿಗೆ ಸದಾ ಚಿಂತಿಸುವ ಪ್ರಾದೇಶಿಕ ಪಕ್ಷಕ್ಕೆ ನಿಮ್ಮೇಲ್ಲರ ಸಹಕಾರ ಇರಲಿ ಎಂದು ತಿಳಿಸಿದರು.
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ ಕೊರಟಗೆರೆ ಕ್ಷೇತ್ರದ ಜನಸಾಮಾನ್ಯರ ಧ್ವನಿ ನಮ್ಮ ಪಿ.ಆರ್.ಸುಧಾಕರಲಾಲ್. ಕಾಂಗ್ರೇಸ್ ನಾಯಕರ ಆಮಿಷ ಮತ್ತು ಒತ್ತಡಗಳಿಗೆ ಜೆಡಿಎಸ್ ಪಕ್ಷ ಮಣಿಯುವುದಿಲ್ಲ. 2023ರ ವಿಧಾನಸಭಾ ಚುನಾವಣೆಗೆ ಕೊರಟಗೆರೆ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಪಿ.ಆರ್.ಸುಧಾಕರಲಾಲ್ ಮಾತ್ರ. ಹೃದಯವಂತ ಜನಸೇವಕ ಪಿ.ಆರ್.ಸುಧಾಕರಲಾಲ್ ಮೇಲೆ ನಿಮ್ಮೆಲ್ಲರ ಆರ್ಶಿವಾದ ಇರಲಿ ಎಂದು ಹೇಳಿದರು.
ಕರ್ನಾಟಕದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂಮಾತನಾಡಿ, ಪರಮೇಶಣ್ಣ ನಿಮಗೆ ದೆಹಲಿಯ ರಾಹುಲ್ ಗಾಂಧಿಯ ಚಿಂತೆ.. ನಮ್ಮ ಕುಮಾರಣ್ಣನಿಗೆ ಕರ್ನಾಟಕದ ರೈತರ ಚಿಂತೆ. ಕೊರಟಗೆರೆ ಕ್ಷೇತ್ರದಿಂದ ಪಿ.ಆರ್.ಸುಧಾಕರಲಾಲ್ 2023ರ ಚುನಾವಣೆಯಲ್ಲಿ ಶಾಸಕನಾಗಿ ಗೆಲ್ಲುವುದು ಖಚಿತ. ಸಮಾಜದ ಎಲ್ಲಾ ವರ್ಗದ ಜನತೆಯ ಪ್ರೀತಿವಿಶ್ವಾಸ ಗಳಿಸಿರುವ ನಮ್ಮೇಲ್ಲರ ಜನನಾಯಕ ಸುಧಾಕರ್ಗೆ ಜಯವಾಗಲಿ ಎಂದು ಶುಭಾ ಹಾರೈಸಿದರು.
ಕೊರಟಗೆರೆ ಕ್ಷೇತ್ರದ ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಮಾತನಾಡಿ, ಕರ್ನಾಟಕ ರಾಜ್ಯಕ್ಕೆ ಗ್ರಾಮವಾಸ್ತವ್ಯ ಮತ್ತು ಜನತಾ ದರ್ಶನ ಪರಿಚಯಿಸಿದ ಕರುನಾಡಿನ ಪ್ರಥಮ ಸಿಎಂ ನಮ್ಮ ಹೆಚ್.ಡಿ.ಕುಮಾರಸ್ವಾಮಿ. 25ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿದ ರೈತನಾಯಕ. ಕರ್ನಾಟಕದಲ್ಲಿ ಈಗ ಜಲತಾ ಜಲಧಾರೆಯ ಮೂಲಕ ನೀರಾವರಿ ಯೋಜನೆಯ ಅನುಷ್ಠಾನ ಮಾಡಿ ರೈತರ ಹೃದಯದಲ್ಲಿ ಅಂರ್ತಜಲ ಭಗೀರಥ ಆಗಲಿದ್ದಾರೆ ಎಂದು ತಿಳಿಸಿದರು.
ಕೊರಟಗೆರೆ ಕ್ಷೇತ್ರದ 6 ಹೋಬಳಿಯಲ್ಲಿ ಜನತಾ ಜಲಧಾರೆ ರಥಯಾತ್ರೆ ಯಶಸ್ವಿಯಾಗಿ ಪಟ್ಟಣದಲ್ಲಿ ಇಂದು ವೇದಿಕೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಕೊರಟಗೆರೆ ಪಟ್ಟಣದ ಸರಕಾರಿ ಬಸ್ ನಿಲ್ದಾಣದಿಂದ ಮುಖ್ಯರಸ್ತೆಯ ಮೂಲಕ ಪಪಂಯ ವೇದಿಕೆಗೆ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಆಗಮಿಸಿದರು. ವೇದಿಕೆ ಕಾರ್ಯಕ್ರಮದಲ್ಲಿ 6 ಸಾವಿರಕ್ಕೂ ಅಧಿಕ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಪಾಲ್ಗೊಂಡಿದ್ದರು.
ವೇದಿಕೆಯಲ್ಲಿ ಯುವ ಜೆಡಿಎಸ್ ಘಟಕ, ಪಪಂಯ ಆಡಳಿತವರ್ಗ, ಅಲ್ಪಸಂಖ್ಯಾತ ಸಮುದಾಯ ಮತ್ತು ಯುವ ಕಾರ್ಯಕರ್ತರು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂಗೆ ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಮಧುಗಿರಿ ಶಾಸಕ ವೀರಭದ್ರಯ್ಯ, ಎಂಎಲ್ಸಿ ತಿಪ್ಪೇಸ್ವಾಮಿ, ತುಮಕೂರು ಜೆಡಿಎಸ್ ಜಿಲ್ಲಾಧ್ಯಕ್ಷ ಅಂಜೀನಪ್ಪ, ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ, ಜಿಪಂ ಸದಸ್ಯರಾದ ಪ್ರೇಮಾ, ಶಿವರಾಮಯ್ಯ, ಜೆಡಿಎಸ್ ಕಾರ್ಯಧ್ಯಕ್ಷ ನರಸಿಂಹರಾಜು, ಯುವಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ಲಕ್ಷ್ಮಣ್, ಪಪಂ ಅಧ್ಯಕ್ಷೆ ಕಾವ್ಯ, ಉಪಾಧ್ಯಕ್ಷೆ ಭಾರತಿ, ಸ್ಥಾಯಿ ಸಮಿತಿ ಅಧ್ಯಕ್ಷ ನಟರಾಜ್ ಸೇರಿದಂತೆ ಇತರರು ಇದ್ದರು.
ವರದಿ: ಮಂಜುಸ್ವಾಮಿ.ಎಂ.ಎನ್ ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LV1k4NzQEjNBnyYQyGVYP5