ಕೊರಟಗೆರೆ : ಡಾ.ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ ಅವರು ತುಮಕೂರು ಜಿಲ್ಲೆಗೆ ರಾಮ-ಲಕ್ಷ್ಮಣರಿದ್ದಂತೆ ಎಂದು ಮಾಜಿ ಸಚಿವ ದಿವಂಗತ ಚೆನ್ನಿಗಪ್ಪನವರ ಹಿರಿಯ ಪುತ್ರ ಡಿ.ಸಿ.ಅರುಣ್ ಕುಮಾರ್ ಹೇಳಿದರು.
ತಾಲ್ಲೂಕಿನ ಕೋಳಾಲ ಹೋಬಳಿಯ ಕುರುಬರಪಾಳ್ಯ(ಮಜರೆ ಪುಟ್ಟ ಸಂದ್ರ)ಗ್ರಾಮದಲ್ಲಿ ಶ್ರೀ ಮುತ್ತುರಾಯಸ್ವಾಮಿ ಕೃಪಾ ಪೋಷಿತ ನಾಟಕ ಮಂಡಳಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಕುರುಕ್ಷೇತ್ರ ನಾಟಕದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ತುಮಕೂರು ಜಿಲ್ಲೆಗೆ ಡಾ.ಜಿ. ಪರಮೇಶ್ವರ್ ಮತ್ತು ಕೆ.ಎನ್. ರಾಜಣ್ಣ ರಾಮ-ಲಕ್ಷ್ಮಣರು ಇದ್ದಂತೆ, ಇಬ್ಬರೂ ಸೇರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹಾಗೂ ಕೊರಟಗೆರೆ ತಾಲ್ಲೂಕು ಮತ್ತು ಮಧುಗಿರಿ ತಾಲ್ಲೂಕುಗಳನ್ನು ಸಮಗ್ರ ಅಭಿವೃದ್ಧಿಯತ್ತ ಕೊಂಡೊಯ್ಯಲು ಶ್ರಮವಹಿಸುತ್ತಿದ್ದಾರೆ ಎಂದರು.
ಮಧುಗಿರಿ ಶೈಕ್ಷಣಿಕ ಜಿಲ್ಲೆಯನ್ನು ಕಂದಾಯ ಜಿಲ್ಲೆಯನ್ನಾಗಿ ಮಾಡಲು ಕೆ.ಎನ್.ರಾಜಣ್ಣ ಬಹಳ ಶ್ರಮವಹಿಸುತ್ತಿದ್ದಾರೆ. ಇವರಿಬ್ಬರಿಂದ ನಮ್ಮ ತುಮಕೂರು ಜಿಲ್ಲೆಯು ಮುಂದೊಂದು ದಿನ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಹೊಂದುತ್ತದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಬಹುಮತದಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸಿ, ರಾಜ್ಯದ ಮುಖ್ಯಮಂತ್ರಿಗಳಾಗಿ ಡಿ.ಕೆ.ಶಿವಕುಮಾರ್ ಮತ್ತು ಡಾ.ಜಿ.ಪರಮೇಶ್ವರ್ ರಾಜ್ಯದ ಸಮಗ್ರ ಅಭಿವೃದ್ಧಿಯತ್ತ ಕೊಂಡೊಯ್ಯಲಿದ್ದಾರೆ. ತುಮಕೂರು ಜಿಲ್ಲೆಯ ಹಿರಿಯ ಸಹೃದಯಿ ರಾಜಕಾರಣಿಯಾದ ಕೆ.ಎನ್.ರಾಜಣ್ಣ ತುಮಕೂರು ಜಿಲ್ಲೆಯ ಉಸ್ತುವಾರಿ ಮಂತ್ರಿಯಾಗಲಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ಭವಿಷ್ಯ ನುಡಿದರು.
ನಂತರ ಮಾತನಾಡಿದ ನಾಟಕ ಅಕಾಡೆಮಿಯ ಸದಸ್ಯರಾದ ಮೈಲಾರಪ್ಪ, ತುಮಕೂರು ಜಿಲ್ಲೆಯು ಕಲಾವಿದರ ಕಣಜವಿದ್ದಂತೆ ಅದರಲ್ಲೂ ಕೊರಟಗೆರೆ ತಾಲ್ಲೂಕಿನ ಕಲಾವಿದರು ಒಳ್ಳೆಯ ಕಲಾವಿದರು ಎಂದರು. ತಾಲ್ಲೂಕಿನ ರಂಗಭೂಮಿ ಮತ್ತು ಇತರೆ ಕಲಾವಿದರುಗಳಿಗೆ ಚೆನ್ನಿಗಪ್ಪನವರ ಕಾಲದಿಂದಲೂ ಕೂಡ ಕಲಾವಿದರ ಕಷ್ಟ-ಸುಖಗಳಿಗೆ ಸ್ಪಂದಿಸುತ್ತಾ ಕಲಾವಿದರ ಏಳಿಗೆಗಾಗಿ ಸಹಾಯ ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಡಿಸಿ ಅರುಣ್ ಕುಮಾರ್ ರವರು ಕುರುಕ್ಷೇತ್ರ ನಾಟಕದಲ್ಲಿ ಭಾಗವಹಿಸಿದಂತಹ ಎಲ್ಲಾ ಕಲಾವಿದರುಗಳಿಗೆ ಸಹಾಯಧನವನ್ನು ನೀಡಿ ಪ್ರೋತ್ಸಾಹಿಸಿದರು.
ಈ ಸಂದರ್ಭದಲ್ಲಿ ಕೊರಟಗೆರೆ ಬ್ಲಾಕ್ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷರಾದ ಅರಕೆರೆ ಶಂಕರ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಶ್ವಥ್ ನಾರಾಯಣ್,ನಾಟಕ ಅಕಾಡೆಮಿ ಸದಸ್ಯರಾದ ಮೈಲಾರಪ್ಪ, ಮಲ್ಲಿಕಾರ್ಜುನಯ್ಯ,ಪಾಲಣ್ಣ, ಪ್ರಸನ್ನಕುಮಾರ್, ಯೂತ್ ಕಾಂಗ್ರೆಸ್ ಅಧ್ಯಕ್ಷ ವಿನಯಕುಮಾರ್, ಶಾಸಕರ ಆಪ್ತ ಕಾರ್ಯದರ್ಶಿ ಅರವಿಂದ್, ಮತ್ತು ರುದ್ರೇಶ್, ಅಧ್ಯಕ್ಷರು-ಉಪಾಧ್ಯಕ್ಷರು ಹಾಗೂ ಸದಸ್ಯರುಗಳು, ಯುವಕರು, ಕಲಾಪೋಷಕರು, ಅಭಿಮಾನಿಗಳು ಸಾರ್ವಜನಿಕರು ಹಾಗೂ ಗ್ರಾಮಸ್ಥರು ಹಾಜರಿದ್ದರು.
ವರದಿ: ಮಂಜುಸ್ವಾಮಿ.ಎಂ.ಎನ್., ಕೊರಟಗೆರೆ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Co3qCxRDyz3FBQg7y8GfBB