ಪಾವಗಡ: ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ, ಅಸೌಕರ್ಯಗಳ ವಿರುದ್ಧ ತಾಲ್ಲೂಕು ಬಿ.ಜೆ.ಪಿ. ಕಾರ್ಯಕರ್ತರು ಸೋಮವಾರ ತಹಶೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತಾಲ್ಲೂಕು ಬಿಜೆಪಿ ಅಧ್ಯಕ್ಷ ದೊಡ್ಡಹಳ್ಳಿ ಅಶೋಕ್ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ, ವೈದ್ಯರ ನೇಮಕಾತಿ ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟರು.
ವೈದ್ಯರು ರಾಜೀನಾಮೆ ನೀಡಿ ರಾಜಕೀಯ ಮಾಡಲಿ: ದೊಡ್ಡಹಳ್ಳಿ ಅಶೋಕ್ ಎಚ್ಚರಿಕೆ
ಬಿಜೆಪಿ ತಾಲ್ಲೂಕು ಅಧ್ಯಕ್ಷ ದೊಡ್ಡಹಳ್ಳಿ ಅಶೋಕ್ ಮಾತನಾಡಿ, “ತಾಲ್ಲೂಕು ವೈದ್ಯರಾದ ಕಿರಣ್ ಕುಮಾರ್ ಅವರು ವೈದ್ಯ ವೃತ್ತಿಗೆ ರಾಜೀನಾಮೆ ನೀಡಿ ರಾಜಕೀಯ ಮಾಡಲಿ. ತಾಲ್ಲೂಕಿನಲ್ಲಿ ಕಾಂಗ್ರೆಸ್ ಪ್ರೇರಿತ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ, ಅವರ ಹೆಸರು ‘ರೆಡ್ ಬುಕ್’ ನಲ್ಲಿ ನಮೂದಿಸಲಾಗುವುದು. ಮುಂದಿನ ದಿನಗಳಲ್ಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಸಿದರು.
ಆಸ್ಪತ್ರೆಗೆ ವೈದ್ಯರ ನೇಮಕಾತಿ ಇಲ್ಲ, ಅಂಬುಲೆನ್ಸ್ ಗೆ ಡೀಸೆಲ್ ಇಲ್ಲ: ಆಕ್ರೋಶ
ಈ ವೇಳೆ, ಮುಖಂಡ ಬಿ.ಜೆ.ಪಿ. ರವಿ ಮಾತನಾಡಿ, “ನಮ್ಮ ಆಡಳಿತದಲ್ಲಿ 13 ಕೋಟಿ ವೆಚ್ಚದಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಾಣ ಮಾಡಿದ್ದರೂ, ಇನ್ನೂ ವೈದ್ಯರನ್ನು ನೇಮಕ ಮಾಡಿಲ್ಲ. ಅಂಬುಲೆನ್ಸ್ ಗೆ ಡೀಸೆಲ್ ಹಾಕಲು ಹಣವಿಲ್ಲ ಎನ್ನುತ್ತಾರೆ. ಸರ್ಕಾರ 13 ಸಾವಿರ ಕೋಟಿ ರೂ. ಎಸ್.ಸಿ/ಎಸ್.ಟಿ ನಿಧಿಯನ್ನು ದುರ್ಬಳಕೆ ಮಾಡಿದೆ. ಈ ಕೂಡಲೇ ಆಸ್ಪತ್ರೆಗೆ ವೈದ್ಯರನ್ನು ನೇಮಿಸಬೇಕು” ಎಂದು ಆಗ್ರಹಿಸಿದರು.
ರೋಗಿಗಳ ಪರದಾಟ– ವೈದ್ಯರಿಲ್ಲದೆ ಪ್ರಾಣ ತ್ಯಾಗ
ಗಣೇಶ್ ನಾಯ್ಕ ಎಂಬವರು ಮಾತನಾಡಿ, “ಕಳೆದ ತಿಂಗಳು ನನ್ನ ತಂದೆಗೆ ತೀವ್ರ ಅನಾರೋಗ್ಯವಾಗಿದ್ದು, ಪಾವಗಡ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರ ಕೊರತೆಯಿಂದ ಚಿಕಿತ್ಸೆ ಸಿಗಲಿಲ್ಲ. ಬೆಂಗಳೂರಿಗೆ ಕರೆದೊಯ್ಯುವ ಮಾರ್ಗ ಮಧ್ಯೆ ಅವರು ಸಾವನ್ನಪ್ಪಿದರು. ಇಂತಹ ಅನ್ಯಾಯ ಯಾರಿಗೂ ಆಗಬಾರದು” ಎಂದು ಅಳಲು ತೋಡಿಕೊಂಡರು.
ನಾವು ಹೋರಾಟ ಮುಂದುವರಿಸುತ್ತೇವೆ -– ಮುಖಂಡರ ಎಚ್ಚರಿಕೆ
ಈ ಪ್ರತಿಭಟನೆಯಲ್ಲಿ ಡಾ..ಜಿ.ವೆಂಕಟರಾಮಯ್ಯ, ಶ್ರೀರಾಮ ಗುಪ್ತಾ, ಶಿವಕುಮಾರ್ ಸಾಕೇಲ್, ಮಾಧವರೆಡ್ಡಿ, ಸುಮನ್, ನಾರಾಯಣಪ್ಪ, ಪ್ರಸನ್ನಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಪಾವಗಡ ಸರ್ಕಾರಿ ಆಸ್ಪತ್ರೆಯಿಂದ ಶನಿಮಹಾತ್ಮ ವೃತ್ತದವರೆಗೆ ಮೆರವಣಿಗೆ ನಡೆಸಿದ ಕಾರ್ಯಕರ್ತರು, ತಹಶೀಲ್ದಾರ್ ಡಿ.ಎನ್. ವರದರಾಜು ಅವರಿಗೆ ಮನವಿ ಸಲ್ಲಿಸಿದರು.
ಆಸ್ಪತ್ರೆಯ ಸಮಸ್ಯೆ ಬಗೆಹರಿಸುವವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಬಿ.ಜೆ.ಪಿ. ಮುಖಂಡರು ಎಚ್ಚರಿಸಿದರು.
ವರದಿ: ನಂದೀಶ್ ನಾಯ್ಕ ಪಿ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Bc4BbJiZ9pF3L0M4QgZdQ4