ಬೆಂಗಳೂರು: ಕನ್ನಡ ಚಿತ್ರರಂಗ ಮತ್ತು ಕಿರುತೆರೆಯ ಖ್ಯಾತ ನಟ, ನಿರ್ಮಾಪಕ ಹಾಗೂ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿ ಖ್ಯಾತಿಯ ದಿಲೀಪ್ ರಾಜ್ (47) ಅವರು ಇಂದು (ಮೇ 13) ಬೆಳಗಿನ ಜಾವ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕಳೆದ ರಾತ್ರಿ ಎದೆನೋವು ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ, ಇಂದು ವೈದ್ಯರ ಭೇಟಿಗೆ ಸಮಯ ನಿಗದಿಪಡಿಸಲಾಗಿತ್ತು. ಆದರೆ ದುರದೃಷ್ಟವಶಾತ್ ಇಂದು ಬೆಳಗಿನ ಜಾವ ತೀವ್ರ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಅವರನ್ನು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
2005ರಲ್ಲಿ ಬಿಡುಗಡೆಯಾದ ‘ಬಾಯ್‌ಫ್ರೆಂಡ್’ ಸಿನಿಮಾ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸಿದರು. ಪುನೀತ್ ರಾಜ್‌ಕುಮಾರ್ ಅಭಿನಯದ ‘ಮಿಲನ’ ಚಿತ್ರದ ವಿಲನ್ ಪಾತ್ರ ಇವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತು. ಸುಮಾರು 28ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು, ‘ಸುಗ್ರೀವ’, ‘ಗೆಳೆಯ’, ‘ಯೂಟರ್ನ್’ ಗಮನಾರ್ಹ ಚಿತ್ರಗಳು. ಇತ್ತೀಚೆಗೆ ‘ಲವ್ ಮಾಕ್ಟೇಲ್ 3’ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು.
‘ಮನೆಯೊಂದು ಮೂರು ಬಾಗಿಲು’, ‘ರಥಸಪ್ತಮಿ’, ‘ಪ್ರೀತಿಗಾಗಿ’ ಅಂತಹ ಹಿಟ್ ಧಾರಾವಾಹಿಗಳಲ್ಲಿ ನಟಿಸಿದ್ದರು. ಇತ್ತೀಚೆಗೆ ‘ಹಿಟ್ಲರ್ ಕಲ್ಯಾಣ’ ಮೂಲಕ ಕಂಬ್ಯಾಕ್ ಮಾಡಿ ‘ಎಜೆ’ ಪಾತ್ರದ ಮೂಲಕ ಮನೆಮಾತಾಗಿದ್ದರು. ನಟನೆಯ ಜೊತೆಗೆ ಯಶಸ್ವಿ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದ ಅವರು, ಸದ್ಯ ‘ಕೃಷ್ಣ ರುಕ್ಕು’ ಧಾರಾವಾಹಿಯನ್ನು ನಿರ್ಮಿಸುತ್ತಿದ್ದರು.
ದಿಲೀಪ್ ರಾಜ್ ಅವರ ಆಪ್ತ ಸ್ನೇಹಿತ, ನಟ ನವೀನ್ ಕೃಷ್ಣ ಅತೀವ ದುಃಖ ವ್ಯಕ್ತಪಡಿಸಿದ್ದು, “ದಿಲೀಪ್ ಆರೋಗ್ಯದ ಬಗ್ಗೆ ತುಂಬಾ ಕಟ್ಟುನಿಟ್ಟಾಗಿದ್ದರು, ಊಟ ಮತ್ತು ವ್ಯಾಯಾಮದ ವಿಚಾರದಲ್ಲಿ ಶಿಸ್ತು ಪಾಲಿಸುತ್ತಿದ್ದರು. ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಇಷ್ಟು ಬೇಗ ನಮ್ಮನ್ನು ಅಗಲುತ್ತಾರೆ ಎಂದು ಊಹಿಸಿರಲಿಲ್ಲ” ಎಂದು ಭಾವುಕರಾದರು.
ದಿಲೀಪ್ ರಾಜ್ ಅವರ ಅಂತ್ಯಕ್ರಿಯೆಯು ಇಂದು ಸಂಜೆ 4 ಗಂಟೆಗೆ ರಾಮನಗರ ಜಿಲ್ಲೆಯ ಗುನ್ನೂರು ಗ್ರಾಮದ ಅವರ ಫಾರ್ಮ್‌ಹೌಸ್‌ನಲ್ಲಿ ನಡೆಯಲಿದೆ. ಹತ್ತು ವರ್ಷಗಳ ಹಿಂದೆ ಅವರು ಇಲ್ಲಿ ಜಮೀನು ಖರೀದಿಸಿ ತೋಟದ ಮನೆ ನಿರ್ಮಿಸಿದ್ದರು.
ಸರಳ ಸಜ್ಜನಿಕೆಯ ನಟನ ಅಗಲಿಕೆಗೆ ಕನ್ನಡ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


