ಹಿರಿಯೂರು: ಬೇಡಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿ ನಡೆಸುತ್ತಿದ್ದ ಅಖಿಲ ಭಾರತ ಬೇಡ ಜಂಗಮ ಸಮಾಜ ಸಂಸ್ಥೆ ಅಧ್ಯಕ್ಷ ಬಿ.ಡಿ.ಹಿರೇಮಠರನ್ನು ಬಂಧಿಸಿರುವ ಪೋಲಿಸರ ಕ್ರಮ ಖಂಡಿಸಿ ಹಿರಿಯೂರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಹಿರಿಯೂರು ನಗರದ ಪ್ರಮುಖ ರಸ್ತೆಗಳ ಮೂಲಕ ಮೆರವಣಿಗೆ ನಡೆಯಿಸಿ ಪ್ರತಿಭಟನೆಕಾರರು ನಂತರ ತಹಶೀಲ್ದಾರರನ್ನು ಭೇಟಿಯಾಗಿ ಸರ್ಕಾರದ ಕ್ರಮದ ವಿರುದ್ಧ ಖಂಡನೆ ವ್ಯಕ್ತಪಡಿಸಿ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಬೇಡ ಜಂಗಮ ಸಮಾಜದ ಮುಖಂಡ ಎಚ್. ಟಿ. ಚಂದ್ರಶೇಖರಯ್ಯ, ಸಂವಿಧಾನ ಬದ್ದ ಹಕ್ಕು ಪಡೆಯಲು ಹೋರಾಟ ನಡೆಸಿದರೆ ಪೋಲಿಸರು ಬಂಧಿಸುತ್ತಿದ್ದಾರೆ. ಬಿ.ಡಿ.ಹಿರೇಮಠ ಫ್ರೀಡಂ ಪಾರ್ಕ್ ನಲ್ಲಿ ಶಾಂತಿಯುತ ಧರಣಿ ನಡೆಸುತ್ತಿದ್ದ ವೇಳೆ ಆಗಮಿಸಿದ ಪೋಲಿಸರು ವಿನಾ ಕಾರಣ ಬಂಧಿಸಿದ್ದಾರೆ. ಅಲ್ಲದೇ ಅತ್ಯಂತ ಕೆಟ್ಟ ರೀತಿಯಲ್ಲಿ ಅವರನ್ನು ನಡೆಸಿಕೊಳ್ಳಲಾಗಿದೆ. ಗಲಾಟೆ ಗದ್ದಲ ಮಾಡದೆ ಗಾಂಧಿ ಮಾರ್ಗದಲ್ಲಿ ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದ ವೇಳೆ ಬಂಧಿಸಲಾಗಿದೆ. ರಾಜ್ಯದಲ್ಲಿ ಪ್ರತಿಭಟನೆ ನಡೆಸುವುದು ಕಾನೂನು ಬಾಹಿರವೇ? ಎಂದು ಪ್ರಶ್ನಿಸಿದರು.
ಫ್ರೀಡಂ ಪಾರ್ಕ್ ನಲ್ಲಿ ಧರಣಿ ನಡೆಸಲು ರಾಜ್ಯದ ವಿವಿಧ ಮೂಲೆಗಳಿಂದಲೂ ಸಹ ಆಗಮಿಸುತ್ತಿದ್ದ ಬೇಡ ಜಂಗಮ ಸಮಾಜದ ಬಂಧುಗಳನ್ನು ಕಳೆದ ತಿಂಗಳು 10 ರಂದು ರಾಷ್ಟ್ರೀಯ ಹೆದ್ದಾರಿಗಳಲ್ಲಿಯೇ ತಡೆಯಲಾಗಿತ್ತು. ನಂತರ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ವಿಷಾದ ವ್ಯಕ್ತಪಡಿಸಿದರು.
ಸರ್ಕಾರ ಬೇಡ ಜಂಗಮರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಚಿಂತಿಸಬೇಕೆ ವಿನಾ ಹೋರಾಟ ಹತ್ತಿಕ್ಕುವ ಕೆಲಸ ಮಾಡಬಾರದೆಂದರು.
ಈ ಸಂದರ್ಭದಲ್ಲಿ ಕೆ.ಆರ್.ವೀರಭದ್ರಯ್ಯ, ಉಮೇಶ್, ಗುಡಾಣ್ ಮಠ, ತೇಜಸ್ವಿ, ಬೇಡ ಜಂಗಮದ ಯುವ ಮುಖಂಡರ ತಾಲ್ಲೂಕು ಅಧ್ಯಕ್ಷರಾದ ಕೆ ಎಮ್ ಶಿವಕುಮಾರ ಸ್ವಾಮಿ, ಅರುಣ್ ಕುಮಾರ್, ಎಸ್.ಎಂ. ಜಗದೀಶ್, ತಿಪ್ಪೇರುದ್ರಸ್ವಾಮಿ, ಅನಿಲ್ ಕುಮಾರ್, ಚಂದ್ರಕಾಂತ್, ಇತರರು ಉಪಸ್ಥಿತರಿದ್ದರು.
ವರದಿ: ಮುರುಳಿಧರನ್ ಆರ್, ಚಿತ್ರದುರ್ಗ.
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JpBVbh0ffuQ4Xiseh6vKbz