ವಿಜಯವಾಡ: ತೆನಾಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ವೈಎಸ್ಆರ್ ಸಿಪಿ ಶಾಸಕ ಅಣ್ಣಬಟೂನಿ ಶಿವಕುಮಾರ್, ಮತದಾರರ ಸರದಿ ಸಾಲಿನಲ್ಲಿ ರಂಪಾಟ ನಡೆಸಿ, ವ್ಯಕ್ತಿಯೊಬ್ಬರ ಕೆನ್ನೆಗೆ ಹೊಡೆದು ವಾಪಾಸು ಪೆಟ್ಟು ತಿಂದ ಸ್ವಾರಸ್ಯಕರ ಪ್ರಸಂಗಕ್ಕೆ ಸೋಮವಾರ ನಡೆದ ಮತದಾನ ಸಾಕ್ಷಿಯಾಯಿತು.
ಮತ ಚಲಾಯಿಸಲು ಮತಗಟ್ಟೆಗೆ ಆಗಮಿಸಿದ ಶಿವಕುಮಾರ್ ಸರದಿಯನ್ನು ಉಲ್ಲಂಘಿಸುವ ಪ್ರಯತ್ನ ಮಾಡಿದರು. ಇದಕ್ಕೆ ಗೊಟ್ಟುಮುಕ್ಕಲ ಸುಧಾಕರ್ ಎಂಬ ಮತದಾರರೊಬ್ಬರು ಆಕ್ಷೇಪಿಸಿದರು. ಆಕ್ಷೇಪಿಸಿದ ಮತದಾರನ ಕೆನ್ನೆಗೆ ಶಾಸಕರು ಹೊಡೆದಾಗ ಪ್ರತಿಯಾಗಿ ಸುಧಾಕರ್ ಕೂಡಾ ತಿರುಗೇಟು ನೀಡಿದರು.
ಘಟನೆ ಅಷ್ಟಕ್ಕೇ ಮುಗಿಯದೇ ಶಿವಕುಮಾರ್ ಬೆಂಬಲಿಗರು ಆ ಬಳಿಕ ಸುಧಾಕರ್ ಮೇಲೆ ಹಲ್ಲೆ ನಡೆಸಿದರು. ಸುಧಾಕರ್ ಅವರ ಎಡಕಣ್ಣಿಗೆ ಗಾಯಗಳಾಗಿವೆ. ಈ ಸಂಘರ್ಷದ ಹಿನ್ನೆಲೆಯಲ್ಲಿ ಶಾಸಕ ಹಾಗೂ ಅವರ ಬೆಂಬಲಿಗರ ವಿರುದ್ಧ ತೆನಾಲಿ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತನ್ನನ್ನು ನಿಂದಿಸಿದ್ದಕ್ಕಾಗಿ ಸುಧಾಕರ್ ಗೆ ಹೊಡೆದದ್ದಾಗಿ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ. “ಸರದಿಯಲ್ಲಿದ್ದ ವ್ಯಕ್ತಿ ಮದ್ಯಪಾನ ಮಾಡಿದ್ದ. ನನ್ನನ್ನು ಹಾಗೂ ಪತ್ನಿಯನ್ನು ನಿಂದಿಸಿದ. ಕಮ್ಮಾ ಸಮುದಾಯಕ್ಕೆ ಸೇರಿದ್ದರೂ ಹಿಂದುಳಿದವರು, ಎಸ್ಸಿ, ಎಸ್ಟಿ ಹಾಗೂ ಅಲ್ಪಸಂಖ್ಯಾತರನ್ನು ಬೆಂಬಲಿಸುತ್ತಿದ್ದೇನೆ ಎಂದು ನನ್ನ ವಿರುದ್ಧ ಆಪಾದನೆ ಮಾಡಿದ. ಈ ಆಧಾರರಹಿತ ಹೇಳಿಕೆಯಿಂದ ಕೋಪಗೊಂಡು ಹೊಡೆದೆ” ಎಂದು ಹೇಳಿಕೊಂಡಿದ್ದಾರೆ. ಘಟನೆಯ ಸಂಪೂರ್ಣ ವಿವರ ತಿಳಿಯದೇ ಮಾಧ್ಯಮಗಳು ಇದನ್ನು ದೊಡ್ಡದು ಮಾಡಿವೆ ಎಂದು ಆಪಾದಿಸಿದರು.
ಈ ಜಗಳದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಿವಕುಮಾರ್ ಗೆ ಚುನಾವಣೆ ಮುಗಿಯುವವರೆಗೆ ಗೃಹಬಂಧನ ವಿಧಿಸಲು ಚುನಾವಣಾ ಆಯೋಗ ಆದೇಶ ನೀಡಿತ್ತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296