ತುಮಕೂರು: ನವೀಕರಿಸಬಹುದಾದ ಇಂಧನ ಮೂಲಗಳೇ ಭವಿಷ್ಯದ ಭರವಸೆ. ಸಿದ್ಧಗಂಗಾ ವೈದ್ಯಕೀಯ ಕಾಲೇಜು ಈ ನಿಟ್ಟಿನಲ್ಲಿ ವಿದ್ಯುತ್ ಸ್ವಾವಲಂಬನೆಗಾಗಿ ಸೋಲಾರ್ ಶಕ್ತಿ ಉತ್ಪಾದಿಸಿ ಪರಿಸರ ಕಾಳಜಿಯ ಬದ್ಧತೆ ನಿರೂಪಿಸಿದೆ ಎಂದು ಸಿದ್ಧಗಂಗಾ ಮಠಾಧ್ಯಕ್ಷರಾದ ಪರಮಪೂಜ್ಯ ಶ್ರೀಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ತಿಳಿಸಿದರು.
ಬಿಜಾಪುರ ಜಿಲ್ಲೆಯ ಝಳಕಿ ಬಳಿ ನಿಯೋಗ್ರೀನ್ ಸಂಸ್ಥೆಯ ಜೊತೆ ಜಂಟಿಯಾಗಿ ನಿರ್ಮಾಣವಾಗಿರುವ 2 ಮೆಗಾ ವ್ಯಾಟ್ ನ ಸೋಲಾರ್ ಘಟಕಕಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯುತ್ ಉತ್ಪಾದನೆಗಾಗಿ ಅತಿವಿರಳವಾಗಿ ಸಿಗುವ ಕಲ್ಲಿದ್ದಲು ಮುಂತಾದ ಸಂಪನ್ಮೂಲಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ ಇದು ಪರಿಸರಕ್ಕೆ ಎಂದಿಗೂ ಮಾರಕವಾಗುವಂತಹದ್ದು, ಬೃಹತ್ ಆರೋಗ್ಯ ಸೇವೆಯನ್ನು ನಿರ್ವಹಿಸಲು ನಮಗೆ ಮಾಸಿಕ ಲಕ್ಷಾಂತರ ರೂ. ಮೌಲ್ಯದ ವಿದ್ಯುತ್ ಬಳಕೆ ಅನಿವಾರ್ಯವಾಗಿತ್ತು ಇದೀಗ ಸೋಲಾರ್ ಶಕ್ತಿ ಬಳಕೆಯಿಂದ ದಾಖಲೆಯ ಮಟ್ಟದಲ್ಲಿ ತಗ್ಗಲಿದೆ ಎಂದರು.
ವೈದ್ಯಕೀಯ ಕಾಲೇಜಿನ ಕಾರ್ಯದರ್ಶಿ ಟಿ.ಎಮ್. ಸ್ವಾಮಿ ಮಾತನಾಡಿ, ಸಿದ್ಧಗಂಗಾ ಆಸ್ಪತ್ರೆ ಆರಂಭದ ದಿನಗಳಲ್ಲೇ ಹೊಸದುರ್ಗ ಬಳಿಯ ಮುತ್ತೂಡು ಎಂಬಲ್ಲಿ 1 ಮೆ.ವ್ಯಾ ಸಾಮರ್ಥ್ಯದ ಸೋಲಾರ್ ಘಟಕ ಸ್ಥಾಪಿಸಿತ್ತು, ಇದೀಗ ಎರಡನೇ ಘಟಕದಿಂದ ಒಟ್ಟು ವಿದ್ಯುತ್ ವೆಚ್ಛದಲ್ಲಿ ಶೇ.90 ತಗ್ಗಿಸಲಾಗಿದೆ ಎಂದರು.
ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ.ಎಸ್.ಪರಮೇಶ್ ಮಾತನಾಡಿ ಪೂಜ್ಯರ ದೂರದೃಷ್ಠಿ ಫಲದಿಂದ ಸೋಲಾರ್ ಘಟಕ ನಿರ್ಮಿಸಲಾಗಿದೆ. ವಿದ್ಯುತ್ ವೆಚ್ಛ ತಗ್ಗುವುದರಿಂದ ಉಚಿತ ಸೇವೆಯಂತಹ ಕಾರ್ಯಕ್ರಮಗಳು ಅಬಾಧಿತವಾಗಿ ಸಾಗಲಿದೆ ಎಂದರು.
ನಿಯೋಗ್ರೀನ್ ಸಿಇಓ ಕೃಷ್ಣ ಕುಲಕರ್ಣಿ ಮಾತನಾಡಿ ನಾವು ನಿರ್ಮಿಸಿರುವ 70 ಎಕರೆ ಒಟ್ಟು ವಿಸ್ತೀರ್ಣದ 40 ಮೆಗಾ ವ್ಯಾಟ್ನ ಸೋಲಾರ್ ಪಾರ್ಕ್ನಲ್ಲಿ 6 ಎಕರೆ ಜಾಗದಲ್ಲಿ ಸಿದ್ಧಗಂಗಾ ವೈದ್ಯಕೀಯ ಕಾಲೇಜು ಸೋಲಾರ್ ಶಕ್ತಿ ಉತ್ಪಾದನೆ ಮಾಡುತ್ತಿದೆ. ಇಂತಹ ಒಂದು ಅವಕಾಶ ನೀಡಿದ ಪೂಜ್ಯರಿಗೆ ಧನ್ಯವಾದ ತಿಳಿಸುತ್ತೇನೆ ಎಂದರು.
ವೈದ್ಯಕೀಯ ಅಧೀಕ್ಷಕ ಡಾ.ನಿರಂಜನ್, ಸಿಇಓ ಡಾ.ಸಂಜೀವಕುಮಾರ್, ಲಕ್ಷೀನಾರಾಯಣ್,ಅಮರ್ ಮುಂತಾದವರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296