ತುಮಕೂರು: ಬುದ್ಧಿವಾದ ಹೇಳಿದ ತಾಯಿಯನ್ನು ಮಗನೇ ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗೆ ತುಮಕೂರು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಕುಣಿಗಲ್ ತಾಲ್ಲೂಕು ಹಂಗರಹಳ್ಳಿ ಗ್ರಾಮದ ನಿವಾಸಿ, ಅಪರಾಧಿ ವಿರೂಪಾಕ್ಷ ಜೀವಾವಧಿ ಶಿಕ್ಷೆಗೊಳಪಟ್ಟ ವ್ಯಕ್ತಿಯಾಗಿದ್ದಾನೆ. ಈತ ತನಗೆ ಬುದ್ದಿವಾದ ಹೇಳಿದ್ದ ತಾಯಿ ಜಯಮ್ಮನ್ನ ಆಕ್ರೋಶದಿಂದ ಕೊಲೆ ಮಾಡಿದ್ದ. 2021 ಜನವರಿ 15ರಂದು ರಾತ್ರಿ ವಿರೂಪಾಕ್ಷ ಈ ದುಷ್ಕೃತ್ಯ ಎಸಗಿದ್ದ.
ಜಯಮ್ಮ ಹೂ ಹಾಗೂ ಹಾಲು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು. ವಿರೂಪಾಕ್ಷ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇರುತ್ತಿದ್ದ. ಪದೇ ಪದೇ ಹಣ ನೀಡುವಂತೆ ತನ್ನ ತಾಯಿಯನ್ನು ಪೀಡಿಸಿ ಗಲಾಟೆ ಮಾಡುತ್ತಿದ್ದ.
ಮಗನ ವರ್ತನೆಯಿಂದ ಬೇಸತ್ತ ತಾಯಿ, ಈ ರೀತಿ ಮಾಡಬೇಡ ಎಂದು ಬುದ್ಧಿವಾದ ಹೇಳಿದ್ದಾರೆ. ಅಲ್ಲದೇ ಹಣ ನೀಡಲು ನಿರಾಕರಿಸಿದ್ದಾರೆ.
ತಾಯಿಯ ಬುದ್ಧಿವಾದವನ್ನು ಕೇಳದ ವಿರೂಪಾಕ್ಷ, ಜಯಮ್ಮ ಮಲಗಿದ್ದ ವೇಳೆ ತಲೆ ಮೇಲೆ ಖಾರ ಅರೆಯುವ ಗುಂಡು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ. ಘಟನೆ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂದಿನ ಸಿಪಿಐ ಗುರುಪ್ರಸಾದ್ ತನಿಖೆ ನಡೆಸಿ ಕೋರ್ಟ್ ಗೆ ದೋಷಾರೋಪಣ ವರದಿ ಸಲ್ಲಿಸಿದ್ರು. ವಾದ ವಿವಾದ ಆಲಿಸಿ ಶಿಕ್ಷೆ ಪ್ರಕಟಿಸಿದ ನ್ಯಾ. ವೈ.ಎಲ್. ಲಡಖಾನ್ , ಐಪಿಸಿ 302 ಅಡಿಯಲ್ಲಿ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರ ದಂಡ ವಿಧಿಸಿತ್ತು. ಸರ್ಕಾರಿ ವಕೀಲರಾದ ಟಿ.ಆರ್.ಅರುಣ್ ಹಾಗೂ ಕೆ.ಸಿ. ದೀಪಕ್ ವಾದ ಮಂಡಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296