ತಿಪಟೂರು: ಕರ್ನಾಟಕದಲ್ಲಿ ಜೂನ್ 30ರಿಂದ ಆರಂಭವಾಗಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ ಐಆರ್) ಪ್ರಕ್ರಿಯೆ ಕುರಿತು ಗ್ರಾಮೀಣ ಹಾಗೂ ನಗರ ಪ್ರದೇಶಗಳ ಜನರಲ್ಲಿರುವ ಗೊಂದಲ ಮತ್ತು ಆತಂಕಗಳನ್ನು ನಿವಾರಿಸಲು ಚುನಾವಣಾ ಆಯೋಗವು ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಹೆಲ್ಪ್ ಲೈನ್ ಕೇಂದ್ರಗಳನ್ನು ಆರಂಭಿಸಬೇಕು ಎಂದು ಕಾಂಗ್ರೆಸ್ ಮುಖಂಡರು ಹಾಗೂ ಜನ ಸ್ಪಂದನ ಟ್ರಸ್ಟ್ ಅಧ್ಯಕ್ಷರಾದ ಸಿ. ಬಿ. ಶಶಿಧರ್ (ಟೂಡಾ) ಒತ್ತಾಯಿಸಿದ್ದಾರೆ.
ಈ ಹಿಂದೆ ಬೇರೆ ರಾಜ್ಯಗಳಲ್ಲಿ ಎಸ್ ಐಆರ್ ಪ್ರಕ್ರಿಯೆ ನಡೆದಾಗ ತಾಂತ್ರಿಕ ಕಾರಣಗಳಿಂದಾಗಿ ಲಕ್ಷಾಂತರ ಅರ್ಹ ಮತದಾರರ ಹೆಸರುಗಳು ಮತದಾರರ ಪಟ್ಟಿಯಿಂದ ಕೈಬಿಟ್ಟುಹೋಗಿರುವ ವರದಿಗಳು ಬಂದಿವೆ. ಈ ಕಹಿ ಅನುಭವ ಕರ್ನಾಟಕದಲ್ಲಿ ಮರುಕಳಿಸಬಾರದು. ಯಾವುದೇ ಒಬ್ಬ ಅರ್ಹ ಮತದಾರನೂ ಮತದಾನದ ಹಕ್ಕಿನಿಂದ ವಂಚಿತನಾಗದಂತೆ ಚುನಾವಣಾ ಆಯೋಗ ಮತ್ತು ರಾಜ್ಯ ಸರ್ಕಾರ ತಕ್ಷಣವೇ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
“ಸಾರ್ವಜನಿಕರಿಗೆ ಎಸ್ ಐಆರ್ ಪ್ರಕ್ರಿಯೆಗೆ ಬೇಕಾಗುವ ವಾಸಸ್ಥಳ ದೃಢೀಕರಣ ಪತ್ರ ಸೇರಿದಂತೆ ಅಗತ್ಯವಿರುವ ಹಲವು ಪ್ರಮುಖ ದಾಖಲೆಗಳನ್ನು ಪಡೆಯಲು ಸ್ಥಳೀಯ ಆಡಳಿತದಿಂದ ಸೂಕ್ತ ನೆರವು ಸಿಗಬೇಕಿದೆ. ಇದಕ್ಕಾಗಿ ತಾಲೂಕು ಕಚೇರಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪ್ರತ್ಯೇಕ ಕೌಂಟರ್‌ಗಳನ್ನು ತೆರೆದು ತ್ವರಿತವಾಗಿ ದಾಖಲೆಗಳನ್ನು ವಿತರಿಸಬೇಕು. ಇದರಿಂದ ಸಾರ್ವಜನಿಕರು ಕಚೇರಿಗಳಿಗೆ ಅಲೆಯುವುದು ಮತ್ತು ಅನಗತ್ಯ ತೊಂದರೆ ಅನುಭವಿಸುವುದು ತಪ್ಪುತ್ತದೆ” ಎಂದು ಶಶಿಧರ್ ಅಭಿಪ್ರಾಯಪಟ್ಟರು.
ಮಾಹಿತಿ ಕೊರತೆಯಿಂದಾಗಿ ಜನರಲ್ಲಿ ಈ ಪ್ರಕ್ರಿಯೆಯ ಬಗ್ಗೆ ಗೊಂದಲ ಸೃಷ್ಟಿಯಾಗುತ್ತಿದ್ದು, ಚುನಾವಣಾ ಆಯೋಗವು ಮಾಧ್ಯಮಗಳು ಹಾಗೂ ಸ್ಥಳೀಯ ಸಂಸ್ಥೆಗಳ ಮೂಲಕ ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಅಷ್ಟೇ ಅಲ್ಲದೆ, ತಳಮಟ್ಟದಲ್ಲಿ ಕೆಲಸ ಮಾಡುವ ಬಿಎಲ್‌ಓಗಳು (ಮತಗಟ್ಟೆ ಮಟ್ಟದ ಅಧಿಕಾರಿಗಳು) ಮತ್ತು ಸಂಬಂಧಿತ ಸಿಬ್ಬಂದಿಗೆ ಎಸ್ ಐಆರ್ ಕುರಿತು ಸಮಗ್ರ ಮಾಹಿತಿ ಹಾಗೂ ಸೂಕ್ತ ತರಬೇತಿ ನೀಡುವ ಮೂಲಕ ಮಾಹಿತಿ ಕೊರತೆಯನ್ನು ನೀಗಿಸಬೇಕು ಎಂದು ಅವರು ಹೇಳಿದರು.
ಒಟ್ಟಾರೆಯಾಗಿ, ಈ ಇಡೀ ಎಸ್ ಐಆರ್ ಪ್ರಕ್ರಿಯೆಯು ಅತ್ಯಂತ ಪಾರದರ್ಶಕ ಹಾಗೂ ಜನಸ್ನೇಹಿಯಾಗಿ ನಡೆಯಬೇಕು. ಯಾವುದೇ ಕಾರಣಕ್ಕೂ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಆಯೋಗವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಿ. ಬಿ. ಶಶಿಧರ್ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ವರದಿ: ಆನಂದ್, ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


