ವೈ.ಎನ್ .ಹೊಸಕೋಟೆ: ಕನ್ನಡ ಸಾಹಿತ್ಯ ಪರಿಷತ್ತು, ಆಂಧ್ರ ಪ್ರದೇಶ ಗಡಿನಾಡು ಘಟಕದ ವತಿಯಿಂದ ಭಾನುವಾರ ಆಂಧ್ರದ ಕಲ್ಯಾಣದುರ್ಗ ತಾಲೂಕಿನ ಕುಂದುರ್ಪಿ ಗ್ರಾಮದ ಫಾದರ್ ವಿನ್ಸೆಂಟ್ ಫೆರರ್ ಕಲ್ಯಾಣ ಮಂಟಪದಲ್ಲಿ 9ನೇ ಸಾಹಿತ್ಯ ಸಮ್ಮೇಳನ ಅತ್ಯಂತ ಅದ್ದೂರಿಯಾಗಿ ವೈಭವದಿಂದ ನಡೆಯಿತು.
ಕಾರ್ಯಕ್ರಮದಲ್ಲಿ ಆಂಧ್ರ ಘಟಕದ ರಾಜ್ಯಾಧ್ಯಕ್ಷ ಹಾಗೂ ಹೈಕೋರ್ಟ್ ನ ವಕೀಲರು ಆದ ಅಂಜನ್ ಕುಮಾರ್ ಮಾತನಾಡಿ, ಗಡಿ ಭಾಗದ ಕನ್ನಡಿಗರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ವಿಶೇಷ ಮೀಸಲಾತಿಯನ್ನು ನೀಡಬೇಕು. ಈಗಾಗಲೇ ತಮಿಳುನಾಡು ಮತ್ತು ಕೇರಳ ಕಾಸರಗೋಡು ಭಾಗದಲ್ಲಿ ಮೀಸಲಾತಿಯನ್ನು ನೀಡಿದ್ದು, ಆಂಧ್ರದ ಮಡಕಶಿರಾ ಆದೋನಿ ಕಲ್ಯಾಣ ದುರ್ಗ ಮತ್ತಿತರ ಕರ್ನಾಟಕದ ಗಡಿಭಾಗದಲ್ಲಿರುವ ಆಂಧ್ರದ ಕನ್ನಡಿಗರಿಗೆ ಶಿಕ್ಷಣ ಉದ್ಯೋಗದಲ್ಲಿ ಮೀಸಲಾತಿಯನ್ನು ನೀಡಬೇಕು ಎಂದು ಒತ್ತಾಯಿಸಿದರು.
ಅಧಿಕೃತವಾಗಿ, ಗಡಿಭಾಗದಲ್ಲಿ ಕನ್ನಡ ಕಾರ್ಯಕ್ರಮ ನಡೆಸಲು ಸಮುದಾಯ ಭವನ ಮತ್ತು ಸಾಂಸ್ಕೃತಿಕ ಭವನ ಗಳ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಸಮ್ಮೇಳನದ ಅಧ್ಯಕ್ಷ ಸತ್ಯನಾರಾಯಣ ಶಾಸ್ತ್ರಿ ಗ್ರಾಮದ ಕೋದಂಡರಾಮಸ್ವಾಮಿ ದೇವಸ್ಥಾನದಿಂದ ಕಾರ್ಯಕ್ರಮ ನಡೆಯುವ ವೇದಿಕೆಯವರೆಗೂ ವಿವಿಧ ಜಾನಪದ ಕಲಾತಂಡಗಳೂಂದಿಗೆ ಅದ್ದೂರಿಯಾಗಿ ಮೆರವಣಿಗೆ ಮೂಲಕ ಕರೆತಲಾಯಿತು.
ಸರ್ವಧರ್ಮ ಶಾಂತಿಪೀಠ ಅಧ್ಯಕ್ಷರಾದ ಶ್ರೀ ಶ್ರೀ ಸಿದ್ದಾಪುರ ರಾಮಸ್ವಾಮಿಜಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮೇಳವಾಯಿ ಗೋವಿಂದ ರೆಡ್ಡಿ, ಡಾ.ಕೈವಾರಶ್ರೀನಿವಾಸ್ , ಡಾ.ಬಿ.ಕೆ.ಮುನಿಸ್ವಾಮಿ, ಪತ್ರಕರ್ತ ಸತ್ಯ ಲೋಕೇಶ್, ಹುಲಿಯೂರು ದುರ್ಗ ಲಕ್ಷ್ಮಿನಾರಾಯಣ್, ಗ್ರೇಡ್ ಟು ತಹಶೀಲ್ದಾರ್ ಶ್ರೀನಿವಾಸ, ವಕೀಲ ನವೀನ್ ಕುಮಾರ್, ಪಾವಗಡ ಸೂರಿ, ಆಂಧ್ರ ಘಟಕದ ಪದಾಧಿಕಾರಿಗಳಾದ ಜಿ.ಎಸ್.ನಿರಂಜನ್ , ಎಸ್. ಕೆ. ಜಯಶಂಕರ್, ಆಂಧ್ರ ಘಟಕದ ಮಾಜಿ ಅಧ್ಯಕ್ಷರಾದ ಮ.ಹ. ರಾಮಚಂದ್ರಪ್ಪ, ಹುಲಿಯೂರುದುರ್ಗ , ಲಕ್ಷ್ಮಿ ನಾರಾಯಣ, ರಾಜೇಶ, ಯುವರಾಜ, ಮಂಜುನಾಥ, ಇಸಾಕ್ ಖಾನ್, ಜಾನಪದ ಕಲಾವಿದ ನಾಗರಾಜು, ದ್ಯಾವೀರಪ್ಪ ಮರಿಸ್ವಾಮಿ ಸೇರಿದಂತೆ ಮತ್ತು ಕುಂದುರ್ಪಿ ಮಂಡಲದ ಜನಪ್ರತಿನಿಧಿಗಳು ಭಾಗವಹಿಸಿದ್ದರು.
ಸಮ್ಮೇಳದಲ್ಲಿ ಧ್ವಜಾರೋಹಣ, ಮೆರವಣಿಗೆ ಉದ್ಘಾಟನೆ, ಕವಿಗೋಷ್ಠಿ, ವಿಚಾರಗೋಷ್ಠಿ, ಮತ್ತು ಸಮಾರೋಪ ಸಮಾರಂಭ ನಡೆಯಿತು. ಸಮ್ಮೇಳದಲ್ಲಿ ಭಾಗವಹಿಸಿದ ಎಲ್ಲಾ ಅತಿಥಿಗಳಿಗೆ, ಕವಿಗಳಿಗೆ ಆಂಧ್ರ ಘಟಕದ ವತಿಯಿಂದ ನೆನಪಿನ ಕಾಣಿಕೆ ನೀಡಿ ಗೌರವಿಸಿ ಸನ್ಮಾನಿಸಲಾಯಿತು.
ಗಡಿನಾಡು ಕನ್ನಡಿಗರಿಗೆ ಶೇಕಡ 5 ಮೀಸಲಾತಿ ಮತ್ತಿತರ ಸವಲತ್ತುಗಳನ್ನು ನೀಡಬೇಕೆಂದು ಸಮ್ಮೇಳದಲ್ಲಿ ಹಕ್ಕೊತಾಯ ಮಂಡಿಸಲಾಯಿತು.
ವರದಿ: ನಂದೀಶ್ ನಾಯ್ಕ, ಪಾವಗಡ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/KN8LiGgEw492Ijygqm0dVW