ತುಮಕೂರು: ತುಮಕೂರು ಜಿಲ್ಲೆ ತಿಪಟೂರು ನಗರದ ಕೋಡಿ ಸರ್ಕಲ್ ನಲ್ಲಿ ಸರ್ಕಾರದ ಯಾವುದೇ ಪೂರ್ವಾನುಮತಿ ಪಡೆಯದೆ ಪ್ರತಿಮೆ ಸ್ಥಾಪನೆ ಮಾಡಿರುವುದರಿಂದ ತಾಲ್ಲೂಕು ಆಡಳಿತ ಪ್ರತಿಮೆ ತೆರವಿಗೆ ಮುಂದಾಗಿದೆ.
ಪ್ರತಿಮೆ ತೆರವುಗೊಳಿಸಲು ತಾಲ್ಲೂಕು ಆಡಳಿತ ಮುಂದಾದ ಹಿನ್ನೆಲೆ, ಕೋಡಿಸರ್ಕಲ್ ವೃತ್ತದಲ್ಲಿ ಸಾವಿರಾರು ಜನ ಜಮಾವಣೆಗೊಂಡು ಪ್ರತಿಭಟನೆಗೆ ಮುಂದಾದರು. ಸರ್ಕಲ್ ನಲ್ಲಿ ಅನಧಿಕೃತವಾಗಿ ಜಗಜ್ಯೋತಿ ಬಸವೇಶ್ವರರ ಪ್ರತಿಮೆ ಸ್ಥಾಪನೆಯ ಪ್ರತಿಮೆ ತೆರವುಗೊಳಿಸಲು ಮುಂದಾದ ತಾಲೂಕು ಆಡಳಿತದ ಕ್ರಮ ಖಂಡಿಸಿ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಕೋಡಿ ಸರ್ಕಲ್ ನಲ್ಲಿ ನಗರಸಭೆ ವತಿಯಿಂದ ಅಭಿವೃದ್ಧಿಪಡಿಸಿ ಸರ್ಕಲ್ ನಲ್ಲಿ ಸ್ಥಾಪಿಸಲಾಗಿದ್ದ ಮಂಟಪದ ಒಳಗೆ, ರಾತ್ರೋರಾತ್ರಿ ಕೆಲ ವ್ಯಕ್ತಿಗಳು ಜಗಜ್ಯೋತಿ ಬಸವೇಶ್ವರರ ಪುತ್ತಳಿಯನ್ನ ತಂದಿಟ್ಟು ಪೂಜೆ ಸಲ್ಲಿಸಲಾಗಿದ್ದು, ಪ್ರತಿಮೆಯನ್ನ ಯಾವುದೇ ಅಧಿಕೃತ ಅನುಮತಿ ಪಡೆಯದೆ ಏಕಾಏಕಿ ಸ್ಥಾಪನೆ ಮಾಡಿರುವುದು ಕಾನೂನುಬಾಹಿರವಾಗಿದೆ ಎಂದು ಆರೋಪಿಸಲಾಯಿತು.
ಸಾರ್ವಜನಿಕ ಸ್ಥಳದಲ್ಲಿ ಪ್ರತಿಮೆ ಸ್ಥಾಪನೆಗೆ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಅವಕಾಶ ಇರುವುದಿಲ್ಲ. ಯಾವುದೇ ಅನುಮತಿ ಪಡೆಯದೆ ಪ್ರತಿಮೆ ಸ್ಥಾಪನೆ ಮಾಡಿರುವುದು ಕಾನೂನುಬಾಹಿರವಾಗಿದೆ ಎಂದು ತಿಪಟೂರು ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತಶ್ರೀ ತಿಳಿಸಿದರು.
ತಿಪಟೂರು ತಾಲೂಕು ಬಸವ ಬಳಗ, ತಿಪಟೂರು ತಾಲೂಕು ವೀರಶೈವ ಲಿಂಗಾಯಿತ ಮಹಾಸಭಾ ಸೇರಿದಂತೆ, ನೂರಾರು ಜನ ಯುವಕರು, ಸಾರ್ವಜನಿಕರು ಕೋಡಿ ಸರ್ಕಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಪರಿಸ್ಥಿತಿಯ ಸೂಕ್ಷ್ಮತೆ ಅರಿತ ತಿಪಟೂರು ಉಪವಿಭಾಗಾಧಿಕಾರಿ, ಸರ್ಕಾರ ಅನುಮತಿ ಇಲ್ಲದೆ ಬಸವೇಶ್ವರರ ಪ್ರತಿಮೆ ಸ್ಥಾಪಿಸಿರುವುದು ಕಾನೂನುಬಾಹಿರ ಜಿಲ್ಲಾಧಿಕಾರಿಗಳ ಆದೇಶದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಸ್ಥಳದಲ್ಲಿ ತಿಪಟೂರು ಡಿವೈಎಸ್ಪಿ ವಿನಾಯಕ ಶೆಟ್ಟಿಗೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296