ಬೆಂಗಳೂರು: ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ ಮತ್ತು ತೆಲಂಗಾಣದ ಹಾದಿಯಲ್ಲೇ ಈಗ ಕೇರಳ ಮತ್ತು ತಮಿಳುನಾಡು ರಾಜ್ಯಗಳ ಮತದಾರರು ಕೂಡ ಬಿಜೆಪಿಯ ಕೋಮುವಾದಿ ರಾಜಕಾರಣಕ್ಕೆ ಎಳ್ಳುನೀರು ಬಿಟ್ಟಿದ್ದಾರೆ. ಈ ಮೂಲಕ ದೇಶದ ಜಾತ್ಯತೀತ ಮತ್ತು ಪ್ರಜಾಪ್ರಭುತ್ವವಾದಿ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ಲಾಘಿಸಿದ್ದಾರೆ.
ಚುನಾವಣಾ ಫಲಿತಾಂಶದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುದೀರ್ಘವಾಗಿ ಪ್ರತಿಕ್ರಿಯಿಸಿರುವ ಅವರು, ವಿವಿಧ ರಾಜ್ಯಗಳ ಫಲಿತಾಂಶದ ಬಗ್ಗೆ ತಮ್ಮ ವಿಶ್ಲೇಷಣೆಯನ್ನು ಹಂಚಿಕೊಂಡಿದ್ದಾರೆ.
“ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಸಾಧಿಸಿರುವ ಗೆಲುವು ನಿರೀಕ್ಷಿತವಾಗಿತ್ತು. ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಪ್ರಚಾರದವರೆಗೆ ಎಲ್ಲವನ್ನೂ ರಾಜ್ಯದ ನಾಯಕರು ಸಂಘಟಿತವಾಗಿ ನಿಭಾಯಿಸಿದ್ದಾರೆ. ವಿಶೇಷವಾಗಿ ಕೇರಳದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರ ಹಗಲಿರುಳಿನ ಶ್ರಮ ಈ ಗೆಲುವಿಗೆ ಕಾರಣವಾಗಿದೆ,” ಎಂದು ಅವರು ಅಭಿನಂದಿಸಿದ್ದಾರೆ. ಅಲ್ಲದೆ, ಕರ್ನಾಟಕದಂತೆ ಕೇರಳದಲ್ಲೂ ಕಾಂಗ್ರೆಸ್ ‘ನುಡಿದಂತೆ ನಡೆಯುವ’ ಆಡಳಿತ ನೀಡಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಬಂಗಾಳದ ಫಲಿತಾಂಶದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸಿಎಂ, “ಮಮತಾ ಬ್ಯಾನರ್ಜಿಯವರ ಸೋಲು ಆಡಳಿತ ವಿರೋಧಿ ಅಲೆಯಲ್ಲ, ಬದಲಾಗಿ ಕೇಂದ್ರ ಚುನಾವಣಾ ಆಯೋಗದ ಕೈವಾಡ ಮತ್ತು ಮತದಾರರ ಪಟ್ಟಿಯ ಮೋಸದಾಟದಿಂದ ಸಂಭವಿಸಿದೆ. SIR ಮೂಲಕ ಲಕ್ಷಾಂತರ ಮಮತಾ ಪರ ಮತದಾರರ ಹೆಸರುಗಳನ್ನು ಕೈಬಿಡಲಾಗಿದೆ. ಬಿಜೆಪಿ ಸರ್ಕಾರಿ ಯಂತ್ರ, ತೋಳ್ಬಲ ಮತ್ತು ಹಣದ ಬಲದಿಂದ ಈ ಗೆಲುವು ಸಾಧಿಸಿದೆ. ಇದು ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವದ ಸೋಲು,” ಎಂದು ಆಕ್ರೋಶ ಹೊರಹಾಕಿದ್ದಾರೆ.
ತಮಿಳುನಾಡು ಫಲಿತಾಂಶದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, “ಡಿಎಂಕೆ ಸರ್ಕಾರದ ಜನಪರ ಆಡಳಿತದ ನಡುವೆಯೂ ಈ ಫಲಿತಾಂಶ ಬಂದಿರುವುದು ಅನಿರೀಕ್ಷಿತ. ತಮಿಳುನಾಡಿನ ಯುವಜನತೆ ಮತ್ತು ಮಹಿಳೆಯರು ನಟ ವಿಜಯ್ ಅವರ ಆಕರ್ಷಣೆಗೆ ಒಳಗಾಗಿರುವುದು ದ್ರಾವಿಡ ಚಳುವಳಿಗೆ ಆದ ಹಿನ್ನಡೆಯಾಗಿದೆ. ಆದರೂ, ಅನಿರೀಕ್ಷಿತ ಗೆಲುವು ಸಾಧಿಸಿದ ನಟ ವಿಜಯ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ,” ಎಂದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


