ಗುಬ್ಬಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನ ಪತ್ನಿಯನ್ನು ಕ್ರೂರವಾಗಿ ಹತ್ಯೆಗೈದ ಪತಿಗೆ ತುಮಕೂರು ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಗುಬ್ಬಿ ಪಟ್ಟಣದ ಕಾಯಿಪೇಟೆಯ ನಿವಾಸಿ ಜಗದೀಶ್ ಎಂಬಾತ ಸುಮಾರು 15 ವರ್ಷಗಳ ಹಿಂದೆ ಶಿಲ್ಪ ಎಂಬುವವರನ್ನು ವಿವಾಹವಾಗಿದ್ದನು. ಈ ದಂಪತಿಗೆ ಮಕ್ಕಳಿರಲಿಲ್ಲ. ಜಗದೀಶ್ ಮದ್ಯಪಾನದ ಚಟಕ್ಕೆ ದಾಸನಾಗಿದ್ದಲ್ಲದೆ, ಪರಸ್ತ್ರೀಯರ ಸಹವಾಸವನ್ನೂ ಹೊಂದಿದ್ದನು. ಈ ವಿಚಾರವಾಗಿ ಪತ್ನಿ ಶಿಲ್ಪ ಪದೇ ಪದೇ ಜಗದೀಶ್ ನನ್ನು ಪ್ರಶ್ನಿಸುತ್ತಿದ್ದಳು. ಇದರಿಂದ ದಂಪತಿಗಳ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಹೆಂಡತಿಯ ವರ್ತನೆಯಿಂದ ಬೇಸತ್ತಿದ್ದ ಜಗದೀಶ್, ಆಕೆಯ ಮೇಲೆ ತೀವ್ರ ದ್ವೇಷ ಸಾಧಿಸುತ್ತಿದ್ದನು.
ಶಿಲ್ಪ ತನ್ನ ತಮ್ಮನ ಮದುವೆಯ ನಿಶ್ಚಿತಾರ್ಥಕ್ಕಾಗಿ ಊರಿಗೆ ಹೋಗಬೇಕೆಂದು ಜಗದೀಶ್ ಬಳಿ ಕೇಳಿದ್ದಳು. ಇದರಿಂದ ಕೆರಳಿದ ಜಗದೀಶ್, ಹಳೆಯ ವೈಮನಸ್ಸನ್ನು ಮನಸ್ಸಿನಲ್ಲಿಟ್ಟುಕೊಂಡು ಶಿಲ್ಪ ಜೊತೆ ಜಗಳವಾಡಿದ್ದಾನೆ. ಕೊಲೆ ಮಾಡುವ ಉದ್ದೇಶದಿಂದಲೇ ಮನೆಯಲ್ಲಿದ್ದ ಮಚ್ಚಿನಿಂದ ಶಿಲ್ಪರ ತಲೆ, ಹಣೆಗೆ ಮತ್ತು ಮೂಗಿಗೆ ಬಲವಾಗಿ ಹೊಡೆದು ರಕ್ತಗಾಯಗೊಳಿಸಿದ್ದಾನೆ. ಅಷ್ಟಕ್ಕೇ ನಿಲ್ಲದೆ, ಆಕೆಯ ಮುಖಕ್ಕೆ ಗುದ್ದಿ, ಗೋಡೆಗೆ ತಲೆಯನ್ನು ಬಲವಾಗಿ ಅಪ್ಪಳಿಸಿ, ಕೊನೆಯದಾಗಿ ವೇಲ್ ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದನು.
ಈ ಭೀಕರ ಘಟನೆಯ ಬಗ್ಗೆ ದಾಖಲಾದ ದೂರಿನ ಮೇರೆಗೆ ಗುಬ್ಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಅಂದಿನ ಗುಬ್ಬಿ ಸರ್ಕಲ್ ಇನ್ ಸ್ಪೆಕ್ಟರ್ ಆಗಿದ್ದ ನಡಾಫ್ ಎಫ್.ಕೆ. ಅವರು ಪ್ರಕರಣದ ತನಿಖೆ ನಡೆಸಿ, ಅಗತ್ಯ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ತುಮಕೂರು 6 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶಿಲ್ಪ ಕೆ.ಎಸ್. ಅವರು, ಆರೋಪಿ ಜಗದೀಶ್ ಮೇಲಿನ ಕೊಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ, ರೂ. 25,000/- ಗಳ ದಂಡ ವಿಧಿಸಿ ತೀರ್ಪು ನೀಡಿದರು.
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಕೆ.ಸಿ. ದೀಪಕ್ ಅವರು ಸಮರ್ಥವಾಗಿ ವಾದ ಮಂಡಿಸಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


