ತುರುವೇಕೆರೆ: ಟಾಟಾ ಪವರ್ ಕಂಪನಿ ಲಿಮಿಟೆಡ್ ರಾಜ್ಯದಲ್ಲಿ ಸಮಾನಾಂತರ ವಿದ್ಯುತ್ ವಿತರಣಾ ಪರವಾನಗಿ ಕೋರಿ ಕೆ.ಇ.ಆರ್.ಸಿ. ಗೆ ಸಲ್ಲಿಸಿರುವ ಅರ್ಜಿಯನ್ನು ಸರ್ಕಾರ ಕೂಡಲೇ ತಿರಸ್ಕರಿಸುವಂತೆ ಕೋರಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ವತಿಯಿಂದ ತಹಶೀಲ್ದಾರ್ ಕುಂಞಿಅಹಮದ್ ಅವರಿಗೆ ಮನವಿ ಸಲ್ಲಿಸಲಾಯಿತು.
ತಾಲ್ಲೂಕು ಘಟಕದ ಅಧ್ಯಕ್ಷ ಎ.ಗಂಗಾಧರಯ್ಯ ಅವರು ಮನವಿ ನೀಡಿ ಮಾತನಾಡಿ ಕರ್ನಾಟಕ ರಾಜ್ಯದ ವಿದ್ಯುತ್ ವಿತರಣಾ ಸಂಸ್ಥೆಗಳು ರಾಜ್ಯದ ರೈತರು, ಬಡವರು, ಮಧ್ಯಮ ವರ್ಗದ ಜನರು, ಸಣ್ಣ ಕೈಗಾರಿಕೆ ಹಾಗೂ ವ್ಯಾಪಾರಿಗಳಿಗೆ ನಿರಂತರವಾಗಿ ಗುಣಮಟ್ಟದ ವಿದ್ಯುತ್ ಸೇವೆಯನ್ನು ಒದಗಿಸುತ್ತಿವೆ. ಸರ್ಕಾರದ ವಿವಿಧ ಜನಪರ ಯೋಜನೆಗಳು ಹಾಗೂ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನದಲ್ಲಿ ವಿದ್ಯುತ್ ವಿತರಣಾ ಸಂಸ್ಥೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ.
ಪ್ರಸ್ತುತ ಟಾಟಾ ಪವರ್ ಕಂಪನಿ ಲಿಮಿಟೆಡ್ ರಾಜ್ಯದಲ್ಲಿ ಸಮಾನಾಂತರ ವಿದ್ಯುತ್ ವಿತರಣಾ ಪರವಾನಗಿ ಪಡೆಯಲು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ(ಕೆ.ಇ.ಆರ್.ಸಿ) ಗೆ ಅರ್ಜಿ ಸಲ್ಲಿಸಿರುವುದು ತಿಳಿದು ಬಂದಿದ್ದು ಖಾಸಗಿ ಕಂಪನಿಗಳ ಮೂಲ ಉದ್ದೇಶ ಲಾಭಗಳಿಕೆ ಆಗಿರುವುದರಿಂದ ಜನಸಾಮಾನ್ಯರ ಮೇಲೆ ಹೊರೆ ಬೀಳಲಿದೆ. ಖಾಸಗಿ ಕಂಪನಿಗಳಿಗೆ ವಿದ್ಯುತ್ ವಿತರಣಾ ಕ್ಷೇತ್ರದಲ್ಲಿ ಅವಕಾಶ ನೀಡುವುದರಿಂದ ಸಾರ್ವಜನಿಕ ಹಿತಾಸಕ್ತಿ, ರೈತರ ಕಲ್ಯಾಣ, ನೌಕರರ ಭದ್ರತೆ ಹಾಗೂ ಸರ್ಕಾರದ ನಿಯಂತ್ರಣದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಆ ನಿಟ್ಟಿನಲ್ಲಿ ಟಾಟಾ ಕಂಪನಿ ಸಲ್ಲಿಸಿರುವ ಅರ್ಜಿಯನ್ನು ವಿದ್ಯುಚ್ಛಕ್ತಿ ಕಾಯ್ದೆ 2003 ರ ಸೆಕ್ಷನ್ 108 ರನ್ವಯ ತಮ್ಮ ಅಧಿಕಾರವನ್ನು ಚಲಾಯಿಸಿ ಸಾರ್ವಜನಿಕ ಹಿತದೃಷ್ಟಿಯಿಂದ ಪರವಾನಗಿಯನ್ನು ನೀಡಬಾರದೆಂದು ಈ ಮೂಲಕ ಸರ್ಕಾರವನ್ನು ಒತ್ತಾಯಿಸುವುದಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ರೈತ ಸಂಘದ ಉಪಾಧ್ಯಕ್ಷ ಕಲ್ಲುಕೋರನಹಳ್ಳಿ ಕೆ.ಬಿ.ಉಮೇಶ್, ವಿಜಯ್ ಕುಮಾರ್, ದುಂಡ ಗೋವಿಂದರಾಜು, ರೇಣುಕಯ್ಯ, ಚನ್ನಕೇಶವ, ಕೈಲಾಸ್, ದಂಡಿನಶಿವರೆ ಮೊದಲಾದವರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC




