ನವದೆಹಲಿ: ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ನೀಡುವ ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿ ಅವರ ಫೋಟೋ ಕಂಡು ಬರುತ್ತಿತ್ತು. ಆದರೆ, ಇದೀಗ ಪ್ರಧಾನಿ ಮೋದಿ ಅವರ ಫೋಟೋ ಮಾಯವಾಗಿದೆ.
‘ಭಾರತೀಯರು ಎಲ್ಲರೂ ಒಟ್ಟಾಗಿ ಕೋವಿಡ್ – 19’ ಮಣಿಸೋಣ ಎಂಬ ಆಶಯ ಹಾಗೂ ಘೋಷ ವಾಕ್ಯ ಹೊಂದಿರುವ ಕೋವಿನ್ ಆಪ್ ನಲ್ಲಿ ಲಸಿಕೆ ಪಡೆದವರು ತಮ್ಮ ಪ್ರಮಾಣ ಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳುವ ಅವಕಾಶ ಇತ್ತು. ಈ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿ ಅವರ ಫೋಟೋ ಇತ್ತು. ಆದರೆ ಇದೀಗ ಘೋಷ ವಾಕ್ಯ ಮಾತ್ರ ಇದೆ. ಪ್ರಧಾನಿ ಮೋದಿ ಅವರ ಫೋಟೋ ತೆಗೆಯಲಾಗಿದೆ.
ಕೋವಿಡ್ ಲಸಿಕಾ ಪ್ರಮಾಣ ಪತ್ರದಲ್ಲಿ ಪ್ರಧಾನಿ ಮೋದಿ ಅವರ ಫೋಟೋ ಮಾಯವಾದ ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಾದ ಚರ್ಚೆ ಶುರುವಾಗಿತ್ತು. ಆಸ್ಟ್ರಾಜೆನಿಕಾ ಹಾಗೂ ಆಕ್ಸ್‌ಫರ್ಡ್ ವಿಶ್ವ ವಿದ್ಯಾಲಯದ ಸಹಯೋಗದಲ್ಲಿ ತಯಾರಿಸಲಾದ ಕೋವಿಡ್ ಲಸಿಕೆ ಫಾರ್ಮುಲಾವನ್ನೇ ಭಾರತದಲ್ಲಿ ಕೋವಿಶೀಲ್ಡ್ ಹೆಸರಿನಲ್ಲಿ ಸೀರಮ್ ಇನ್ಸ್‌ಸ್ಟಿಟ್ಯೂಟ್ ಸಂಸ್ಥೆ ಉತ್ಪಾದಿಸಿತ್ತು.
ದೇಶಾದ್ಯಂತ ಈ ಲಸಿಕೆ ನೀಡಲಾಗಿತ್ತು. ಇದೀಗ ಆಸ್ಟ್ರಾಜೆನಿಕಾ ಸಂಸ್ಥೆಯೇ ಬ್ರಿಟನ್ ನ್ಯಾಯಾಲಯದಲ್ಲಿ ತನ್ನ ಲಸಿಕೆಯಿಂದ ‘ವಿರಳ ಅಡ್ಡ ಪರಿಣಾಮ’ ಉಂಟಾಗುತ್ತದೆ ಎಂದು ತಪ್ಪೊಪ್ಪಿಗೆ ಪ್ರಮಾಣ ಪತ್ರ ಸಲ್ಲಿಸಿದೆ. ತನ್ನ ಲಸಿಕೆಯಿಂದ ರಕ್ತ ಹೆಪ್ಪುಗಟ್ಟುವಿಕೆ ಹಾಗೂ ರಕ್ತ ಕಣಗಳ ಕುಸಿತ ಆಗುವ ಸಮಸ್ಯೆ ಕೆಲವರಲ್ಲಿ ಕಾಡಬಹುದು ಎಂದು ಹೇಳಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಕೋವಿಡ್ ಪ್ರಮಾಣ ಪತ್ರದಿಂದ ಪ್ರಧಾನಿ ಮೋದಿ ಅವರ ಫೋಟೋ ಮಾಯವಾಗಿದೆ. ಲಸಿಕೆ ವಿವಾದದಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಆಗಬಹುದು ಅನ್ನೋ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ನೆಟ್ಟಿಗರು ವಿಶ್ಲೇಷಿಸಿದ್ದರು. ಆದರೆ ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟನೆ ನೀಡಿದ್ದು, ಚುನಾವಣಾ ನೀತಿ ಸಂಹಿತೆ ಕಾರಣಕ್ಕೆ ಪ್ರಧಾನಿ ಮೋದಿ ಅವರ ಫೋಟೋ ತೆಗೆಯಲಾಗಿದೆ ಎಂದು ಹೇಳಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296