ಅಂದು ದರ್ಶನ್ ಜೊತೆಗೆ ಫೋಟೋದಲ್ಲಿ ಕಾಣಿಸಿಕೊಂಡಿದ್ದ ಬೆಂಗಳೂರಿನ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗನಿಗೂ ಈಗ ಕಂಟಕ ಎದುರಾಗಿದ್ದು, ಸದ್ಯ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಅಲಿಯಾಸ್ ನಾಗರಾಜ್‌ನನ್ನು ಇಲ್ಲಿಂದ ಬೇರೆ ಜೈಲಿಗೆ ಶಿಫ್ಟ್ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.
ಉತ್ತರ ಕರ್ನಾಟಕದ ಯಾವುದಾದರೂ ಜೈಲಿಗೆ ನಾಗ ಶಿಫ್ಟ್ ಆಗುವ ಸಾಧ್ಯತೆ ಇದೆಯಂತೆ. ಸಿದ್ದಾಪುರದ ಮಹೇಶ್ ಎಂಬಾತನ ಕೊಲೆ ಕೇಸ್ ನಲ್ಲಿ ವಿಲ್ಸನ್ ನಾಗನನ್ನು ಬಂಧಿಸಿ, ಜೈಲಿಗೆ ಕಳುಹಿಸಲಾಗಿತ್ತು.
ಇದಾದ ಬಳಿಕ ರೇಣುಕಾಸ್ವಾಮಿ ಕೊಲೆ ಕೇಸ್ ಹೊರಬಂದು, ಇದರಲ್ಲಿ ನಟ ದರ್ಶನ್ ಕೂಡ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಈ ವೇಳೆ ನಾಗನ ಜೊತೆ ದರ್ಶನ್ ಆತ್ಮೀಯವಾಗಿದ್ದರು ಎಂದು ಹೇಳಲಾಗಿತ್ತು. ಅಲ್ಲದೆ ದರ್ಶನ್ ಗೆ ಜೈಲಿನಲ್ಲೂ ರಾಜಾತಿಥ್ಯ ನೀಡಲಾಗುತ್ತಿತ್ತು. ಇದರ ಹೊಣೆಯನ್ನು ವಿಲ್ಸನ್ ಗಾರ್ಡನ್ ನಾಗನೇ ವಹಿಸಿಕೊಂಡಿದ್ದ ಎಂಬ ಗುಸುಗುಸು ಇತ್ತು.
ಈ ವದಂತಿ ಬೆನ್ನಲ್ಲೇ ನಟ ದರ್ಶನ್ ಅವರು ಜೈಲಿನಲ್ಲಿದ್ದ ಫೋಟೋವೊಂದು ಲೀಕ್ ಆಗಿ ಎಲ್ಲೆಡೆ ಹರಿದಾಡಿತ್ತು. ಇದರಲ್ಲಿ ದರ್ಶನ್ ಈ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗನ ಜೊತೆ ಕುಳಿತುಕೊಂಡು, ಕೈಯಲ್ಲಿ ಕಾಫಿ ಮಗ್ ಹಾಗೂ ಸಿಗರೇಟ್ ಸೇದಿಕೊಂಡು ಆರಾಮವಾಗಿದ್ದರು. ಬಳಿಕ ಈ ರಾಜಾತಿಥ್ಯಕ್ಕೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು.
ಕೂಡಲೇ ಎಚ್ಚೆತ್ತುಕೊಂಡಿದ್ದ ರಾಜ್ಯ ಸರ್ಕಾರವು ಜೈಲಿನಲ್ಲಿ ಇದಕ್ಕೆಲ್ಲ ಅವಕಾಶ ನೀಡಿದ್ದ ಅಧಿಕಾರಿಗಳು ಸೇರಿದಂತೆ ಹಲವರನ್ನು ಸಸ್ಪೆಂಡ್ ಮಾಡಿದ್ದಲ್ಲದೆ, ನಟ ದರ್ಶನ್ ಅವರನ್ನು ಬೆಂಗಳೂರಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವಂತೆ ಸೂಚನೆ ನೀಡಿತ್ತು. ಅದರಂತೆ ದರ್ಶನ್ ಸದ್ಯ ಬಳ್ಳಾರಿ ಜೈಲಿನಲ್ಲಿದ್ದಾರೆ. ಇದೀಗ ಇತ್ತ ದರ್ಶನ್ ಗೆ ಸ್ಪೆಷಲ್ ಅರೇಂಜ್‌ಮೆಂಟ್ ಮಾಡಿದ್ದ ವಿಲ್ಸನ್ ಗಾರ್ಡನ್ ನಾಗನಿಗೂ ಕಂಟಕ ಶುರುವಾಗಿದೆ. ನಾಗನನ್ನು ಕಲಬುರಗಿ ಅಥವಾ ಉತ್ತರ ಕರ್ನಾಟಕ ಭಾಗದ ಯಾವುದಾರೂ ಜೈಲಿಗೆ ಸ್ಥಳಾಂತರಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q